ಎಂದಿಗೋ?
ಸುಪ್ತಾವಸ್ಥೆಯಲ್ಲಿ ಮನಸ್ಸಿನಲ್ಲಿ ಮಾರ್ದನಿಸುವ ಪ್ರಶ್ನೆ ಒಂದೇ.. ಎಂದಿಗೋ? ಪುರಾವೆಯಿಲ್ಲದ ಹಸಿ ವೇದಾಂತಗಳ ಜನಮಾನಸ ಒಪ್ಪುವುದೆಂದಿಗೋ? ಬತ್ತದ ಮೋಹದ ದಾಹ ತೃಪ್ತಿಯೆಂಬ ಸುರೆಯ ಕುಡಿಯುವುದೆಂದಿಗೋ? ಬೇಡಿಗಳಿಂದ ಬಂಧಿತ ಮನಸ್ಸು ಮುಕ್ತಾಕಾಶದಲ್ಲಿ ಹಾರುವುದೆಂದಿಗೂ? ಬಿಳಿಪುಟದಲ್ಲಿ ಬರೆದು ಗೀಚಬಲ್ಲ ದುಮ್ಮಾನಗಳ ಕರಿ ಶಾಹಿ ಖಾಲಿಯಾಗುವುದೆಂದಿಗೋ? ಕಮರಿದ ಕೈದಿ ಆಲೋಚನೆಗಳಿಗೆ ದೇಹದಿಂದ ಮುಕ್ತಿ ಎಂದಿಗೋ? ಉತ್ತರವಿಲ್ಲದ ಅಸಂಖ್ಯಾತ ಪ್ರಶ್ನೆಗಳ ಮರುಹುಟ್ಟಿಗೆ ಅಂತ್ಯವೆಂದಿಗೋ? ಅಂಟದ ಬಂಧಗಳ ಮರ್ಮಜಾಲ ಮಾಯವಾಗುವುದು ಎಂದಿಗೋ? ದಶದಿಕ್ಕುಗಳಲ್ಲಿಯೂ ಹುಚ್ಚೆದ್ದು ಧಿಕ್ಕರಿಸಿ ಓಡುವ ಮನಸ್ಸಿನ ಸಾವು ಎಂದಿಗೋ? ಶೂನ್ಯಭಾವ ಕವಿದಿರುವ ಕಂಗಳಿಗೆ ರಂಗಿನ ಮಿಲನ ಎಂದಿಗೋ? ಸ್ತಬ್ಧ ಹೃದಯಕ್ಕೆ ಮೂಕರಾಗ ಹಾಡಾಗಿ ಕಿವಿಗೆ ರಾಚುವುದು ಎಂದಿಗೋ? ಕಳಾಹೀನ ಕಲ್ಪನೆಯ ಛಾಯೆ ಕಳಚಿ ಬೀಳಲು ಕೊಡದ ಶಾಸ್ತ್ರದ ಧಿಕ್ಕಾರ ಎಂದಿಗೋ? ಸಡಿಲ ದಾರಗಳಿಂದ ಹೆಣೆದ ಭಾವಭಂಗಿಗಳು ಭದ್ರವಾಗುವುದು ಎಂದಿಗೋ? ಅಭೇಧ್ಯ ಯೋಚನೆಗಳ ಎಲ್ಲೆಮೀರಿ ಖುಷಿಯ ಹೊಂಬಿಸಿಲು ಟಸಿಲೊಡೆಯುವುದು ಎಂದಿಗೋ? ಭೀತ ಬಡಿದ ಆಂತರ್ಯದಂಗಳವ ನೆಮ್ಮದಿಯ ಮಳೆ ತೋಯ್ದುವುದೆಂದಿಗೋ? ಸ್ಥೂಲನೋಟದಲ್ಲೂ ಅನಪೇಕ್ಷಿತ ವಿರಸಗಳು ಭ್ರಮೆ ತುಂಬಿದ ನೋಡುಗನಿಗೆ ಕಾಣುವುದೆಂದಿಗೋ? ತನ್ನದು ತನ್ನದಲ್ಲದರ ತಲ್ಲಣ ಮುಗಿಯುವ ಪರ್ವಕಾಲ ಎಂದಿಗೋ?