ಮೊಳೆಯ ಮೊನಚು
1. ಅವಚುವ ನೋವುಗಳಿಗೆ ನಾಮಕರಣವಂತೆ ಏನೋ ದುಃಖವ ವರ್ಗೀಕರಣ ಮಾಡುವಂತೆ ಕಾಣದ ಭಾವಕ್ಕೆ ಕಲಿತ ಹೆಸರಿನ ಅರ್ಪಣೆ ಇದ ಪಡೆದೂ ಅನುಭವಿಸಿ ತೀರದವರು ಯಾರೋ! 2.ಮೋಹ ಮರ್ಮದ ಪೊರೆ ಎಂದಾದರೆ, ಬತ್ತದ ದಾಹ ತಾನೇ ಅದರ ಅಣುವು? ಅಣು ಅಣುವಿಂದಲೂ ಕೊಸರುವ ವೇದನೆಗೆ ಬಾಹ್ಯ ಸುಖದ ಚೌಕಟ್ಟೇ? 3. ಅಂಟದ ಆರಾಮದ ಕನಸಲೂ ಕನವರಿಕೆ ಕುರುಡಿ ನಾನು ಹೋಗುವೆ ಕೈಬೀಸಿ ಕರೆದು ಕೈ ಬಿಡುವ ಕೊಳಕಿನ ಬದಿಗೆ! ಪ್ರತಿ ಸಲವೂ ಕೆಂಡ ನುಂಗುವ ಪರಿಗೆ ಪನ್ನೀರ ಕೊಟ್ಟರೆ ಅದು ಅನುಭವಿಸುವ ಹದವೇ? 4.ಬಹುಕಾಲದಿಂದ ಮೊಳೆಯ ಮೊನಚ ಮೇಲೆ ನಿಂತು ಕಾದೆ, ಬೆಳ್ಮೋಡವೊಂದು ಕಾರ್ಮೋಡವಾಗಿ ಕರಗಿ ಮಳೆಯ ಸುರಿಸಲೆಂದು.. ಮೋಡಕ್ಕೆ ಸೊಕ್ಕಿನ ಸರಪಳಿಯ ಬಂಧವ ಬಿಡಿಸಲು ಆಲಸ್ಯ ಕಟ್ಟಿದ ಕಂಗಳ ನೋವು ಮೀರಿಸಿರಲು ಮೊಳೆಯ ಮೊ ನಚ ನೋವ! 5. ಒಲ್ಲೆ ಎನುವೆ ಕ್ಷಣಿಕ ಸುಖವ ಛದ್ಮ ವೇಷದ ಕನಿಕರವ ನಂಬದೇ ಬಣ್ಣ ಹಚ್ಚಿರಲು ಅದು ವಿಧವಿಧದ ವರ್ಷಧಾರೆಯಲ್ಲೂ ಕಳಚದ ಅದರ ಬಂಧಕ್ಕೆ!