ನಂತರ?
ಪ್ರತಿದಿನ ಪ್ರೀತಿಸೋ ಹುಡುಗನಿಗಿದೋ ಪ್ರಶ್ನೆ!
ಬೆನ್ನು ಮುಖವಾದ ನಂತರವೂ ನನಗೆಂದು ನೀನು ಹಂಬಲಿಸುವೆಯಾ?
ನನ್ನನ್ನು ನಿನ್ನಯ ಕವಿತೆಯ ಅಕ್ಷರಗಳನ್ನಾಗಿಸುವೆಯಾ?
ಮನದ ಭಿತ್ತಿಯಲ್ಲಿ ನೆನಪಿನಲ್ಲಿ ಕಿರುಬೆರಳ ಅದ್ದಿ ಚಿತ್ತಾರ ಬಿಡಿಸುವೆಯಾ?
ನಿನ್ನದೆಯಲ್ಲಿ ಅರಳೋ ಹೂವಿನ ಕಂಪು ನನ್ನವೆಯಾ?
ಈಗಿಂದಲೇ ಬರದ ದಿನಗಳಿಗೆ ನನ್ನಯದೆಲ್ಲವ ಸಾಲ ಕೇಳುವೆಯಾ?
ನಿದಿರೆ ಸಿಗದ ಕಂಗಳ ಕಾಡುವ ದುಃಸ್ವಪ್ನ ನಾನಾಗುವೆನಾ?
ನಿನ್ನ ಕಾಡಿ ಕೆರಳಿಸುವ ಮರುಭೂಮಿಯ ಮರೀಚಿಕೆ ನಾನಗುವೆನಾ?
ಸಿಗದ ನನ್ನನು ನೀ ಸಿಕ್ಕಿದ ಎಲ್ಲದರಲ್ಲಿಯೂ ಎಲ್ಲೆ ಮೀರಿ ಹುಡುಕುವೆಯಾ?
ನನ್ನ ಕಿತ್ತು ಕೊಂಡೈದ ಕಾಲವ ಅನಕ್ಷಣವು ಶಪಿಸುವೆಯಾ?
ಕಳೆದ ಕ್ಷಣಗಳ ಭಾವಸುಧೆಯ ನಿನ್ನ ಮಾತಿನಲ್ಲಿ ಹರಿಸುವೆಯಾ?
ನನ್ನತನದಿಂದ ನಾನಿಲ್ಲದ ನನ್ನಯಗಳಿಗೆ ನನ್ನ ಭಾವದಿಂದ ಆವರಿಸುವೆಯಾ?
ನಿಜತಃ ನೀನು ನನ್ನನ್ನು ಅಷ್ಟೊಂದು ಅರ್ಥೈಸಿಕೊಂಡಿರುವೆಯಾ ?
ವ್ಯಗ್ರನಾಗಿ ನನ್ನ ಚಿತ್ರವನ್ನು ಚಿಪ್ಪಳಿಸಿ ಹಿಂದಿರುಗಿ ಜೋಡಿಸಲು ಪರಿತಪಿಸುವೆಯಾ?
ನನ್ನ ಅಂತರಾಳವ ಕದಡಿದ ಭಾವನೆಗಳ ಮೂಲವ ಕುರಿತು ಯೋಚಿಸುವೆಯಾ?
ಮೊಳಕೆಯೊಡೆಯುತ್ತಿರುವ ಈ ಚಿಂತೆಗಳ ತೊಟ್ಟಿಲಲ್ಲಿ ತೂಗಿ ಮುಂದೂಡುವೆಯಾ?
ಪ್ರಶ್ನೆಗಳ ಉತ್ತರವಾಗಿ ಬದಲಿಸಬಲ್ಲೆಯಾ?
ಇಲ್ಲಸಲ್ಲದ ಇದೆಲ್ಲದಕಾಗಿ ನನ್ನನು ನೀ ಮೂದಲಿಸುವೆಯಾ?
ಹೇಳು ನೀ ಈಗ, ನಾನೆಂದು ನಿನ್ನ ಸಂಭ್ರಮವೇ ಅಲ್ಲವೇ?
ಸಮಕ್ಷಮದಲ್ಲಿಯೂ,ನಂತರವೂ!!!!

Comments
Post a Comment