ಒಲುಮೆ
೧. ನಿನಗೋಸ್ಕರ ತೀರ ಪರಿಚಿತಳಾದೆ, ಪ್ರೇಮದ ಲಹರಿಲೋಕಕೆ
ನಿನ್ನಿಂದ ಭಗ್ನ ಪ್ರೀತಿಯ ಪದ ಕಟ್ಟುವ ಆಶು ಕವಿಯಾದೆ
ನಿನ್ನೊಲುಮೆಯಿಂದ ಸನಿಹದ ಸಾರವ ಭಟ್ಟಿ ಇರಿಸಿ ಹೃದಯದ ಕವಾಟುಗಳಲ್ಲಿ ಕೂಡಿಟ್ಟಿರುವೆ
ನಿನ್ನ ನೆನಪಿಂದ ಅದ್ದಿ ಬರೆದ ಚಿತ್ರವ ನೂರೆಂಟು ಬಣ್ಣಗಳಿಂದ ಸಂಭ್ರಮಿಸಿಹೆ
ಇಷ್ಟೆಲ್ಲಕ್ಕೂ ಅಪ್ಪುಗೆಯ ಉಡುಗೊರೆಯ ನೀಡದೆ ಏಕೆ ಕಾಡುವೆ?
ಇನ್ನೂ ಬೇಕೇ ನಿನಗೆ ನನ್ನಂತರಾಳದ ಸಾಕ್ಷಿ?
ಆಗಲು ನಾ ಸದಾ ಸಿದ್ಧ!
ಯಶಸ್ವಿ ನಾನಲ್ಲವ? ಪ್ರೀತಿಸಲು
ಆದರೆ ಆಭಾಗ್ಯೆ ಕೂಡ ನಾನೇ ಅಲ್ಲವಾ? ಪ್ರೀತಿಸಲ್ಪಡಲು!!!
೨. ಆತನ ಪ್ರತಿ ನನ್ನ ಭಾವನೆಗಳಿಗೆ ರೂಪ ನೀಡಲು ನನ್ನ ಕರಗಳೀಗ ಹಿಮಗಟ್ಟಿವೆ
ಅಳೆಯಲು ನಾನೊಲ್ಲೆ, ಬರೆಯದೆ ನಾನರಿಯೆ
ನಿನ್ನದನಿ ಅಡಗಿಹುದು ನಾಡಿ ಬಡಿತಗೊಳಗೆ
ಹಾರಿ ಹೋಗಬೇಡ ಪ್ರೀತಿಯ ಪತಂಗ, ಬಹು ಕೃಷಳಾಗಿಹೆ
ಇದೋ ಕಾರಣ ಬೇಕೆ?
ನಿನ್ನೀ ಹಠ ಅರ್ಭುದದಂತೆ ವ್ಯಾಪಿಸಿದೆ ನನ್ನೀ ತನುವ!
ತುಸು ಶಮನವೆಂದು?
೩. ಹೃದಯವ ಪಳಗಿಸೋದು ಪ್ರೀತಿಯೇ?
ಇಲ್ಲವೇ ಪ್ರೀತಿಯೇ ಸೂಡೋ ಹಿಂಸೆಯೇ?
ಇರಲಿ, ಈ ಹೃದಯ ನನ್ನ ಮಾತಿಗೆ ಪಳಗಿ ವಾಸ್ತವತೆಗೆ ತಾಳ ಹಾಕಿದಲ್ಲಿ ಒಂದು ಪಕ್ಷ, ಈ ಕಟ್ಟುಬಂಧನಗಳಲ್ಲಿ ಒಲವಿನ ಬೀಜಾಕ್ಷರ ಒಂದಾದರೂ ಮೊಳಗೀತೆ?
ಅಹುದಾದಲ್ಲಿ, ಕಲಿಸೆನಗೆ ನಿನ್ನಯ ಉಪಸ್ಥಿತಿಗನುಗು ಣವಾಗಿ ಬಡಿಯಲದರ!
೪. ಒಳಾಂಗಣದ ಗಿಡ ನಾನು
ಹೂ ಬಿಡಲಾರೆ, ಅತೀ ಪ್ರೀತಿ ತಾಳಲಾರೆ
ಬಿಸಿಲಿರದೆ ಬದುಕಲಾರೆ, ಮೃದುಲೆ ನಾನು
ಜೋಕೆ, ಬಚ್ಚಿಟ್ಟು ಹಿಡಿದಿಟ್ಟುಕೊ ಎನ್ನ
ಸುಂದರಗೊಳಿಸಿಯೇನು ನಿನ್ನಾವರಣವ
೫.ನನ್ನಯ ಸ್ವಪ್ನಗಳ ಅವಿಭಾಜ್ಯ ಭಾಗವಾಗಿ, ಒಂದಿರುಳೂ ಬಿಡದೆ ಕಾಡುವ ನೀನು
ಪ್ರೀತಿಯ ಗೈರಿನ ಕೈ ಹಿಡಿದು ಕಾಡುವ ನಿದ್ರೆ ಕಾಣದ ರಾತ್ರಿಗಳ ಸ್ವಾಮ್ಯತೆ ನಾನು!
ಬಹುಶಃ ಒಲವಿನ ನರಳಿಕೆಯಲ್ಲಿ ನಲಿವ ನಲ್ಲ ನೀನಲ್ಲ, ಈ ಪ್ರೀತಿ ನೀನಿರುವ ನಮಗಲ್ಲ!
೬. ಯಾರೋ ಹೇಳಿದರಂತೆ, ಮನಸ್ಸು ದೇಗುಲವಂತೆ, ಮಿಂದು ಒಳಗೆ ಬಾ ಎಂದು!
ಹೆಡ್ಡ ನೀನು!
ನಾನು ಬಳಿದ ಅನುರಾಗದ ರಂಗೆಲ್ಲವ ತೊಳೆದು ಬೆತ್ತಲೆಯಾಗಿ ಭಾವನೆಗಳಲ್ಲಿ ಮೀಸಾಡಲು ಬಂದಿಹೆ ಯಲ್ಲ, ಮನ ಮಂದಿರಕ್ಕೆ ದಿಟವಾಗಲೂ ಬರುವ ಆಸೆ ಹೊತ್ತು ಬಂದಿರುವೆಯಾ?
ಭಕ್ತಿ ನೀಡದೆ, ಒಲಿದ ದೇವನಾರಿವನೋ ಮೂಢ?
~ Navya P Hegde
Blr
20.01.26
Comments
Post a Comment