Posts

Showing posts from February, 2023

ವೈಖರಿ

Image
ಬಟ್ಟ ಬಯಲಲಿ ನಿಂತೆ ನಾಳೆಗೆ ಬೆನ್ನು ಮಾಡಿ ಎದುರು ನೋಡಲು ಕಾಲದಲ್ಲಿ ಹೂತ ನಿನ್ನೆಗಳ ನನ್ನ ಹೇಳಿದೆ ನನಗೆ ನಾನು ನೂರಾರು ಗೊಡ್ಡು ಕಥೆಗಳ ಕೇಳುಗನಾಗಿ ಅರ್ಪಿಸಿಕೊಂಡು ನನ್ನ ನಾನು ಕಳೆದುಕೊಳ್ಳುವಿಕೆಯಲ್ಲಿ|| ಅಸ್ಪಷ್ಟವಾಗಿ ಭಾಸವಾಗುತ್ತಿತ್ತು ಭಾವಗಳ ಮೇಳದಲ್ಲಿ ವಿಕ್ರಯಗೊಂಡಂತೆ ಅಂದುಕೊಂಡೆ ತೂಗಿ ಅಳೆಯುತಿದ್ದೆ ಎಲ್ಲವ,ಎಲ್ಲದರ ಹೊರತಾಗಿ ಮಂಥನಗೊಳ್ಳುತ್ತಿತ್ತು ದಿಂಬಿನಡಿಯಾದ ಅದೆಷ್ಟೋ ಪ್ರವರಗಳು ತೆತ್ತಿದೆ ಬೆಲೆ ಎಲ್ಲವ ನನ್ನದೇ ಎಂದು ಬಿಗಿಯಾಗಿ ಹಿಡಿದು|| ನಿರ್ವಂಚನಾ ಪಾತ್ರವಾಗಿ ಜೀವಿಸಿದ್ದೆ ನಾನು ಅಂದು ಸ್ಪರ್ಶಕ್ಕೆ ಸಿಗದ ಕಲ್ಪನಾ ಲೋಕದಲ್ಲಿ ಉಚ್ಚಾಯಮಾನವಾಗಿ ಕಂಗೊಳಿಸಿದೆ ಹುಣ್ಣಿಮೆಯ ಚಂದ್ರಮನಂತೆ  ಮರೆತೆ ನನಗೂ ಒಂದು ಸಾವಿದೆಯೆಂದು ತೋರೆದೇ ಬಿಟ್ಟೆ ನಾನು ಪರ್ಯಾಯ ಬದುಕಿನ ಕನಸನ್ನು|| ಅಷ್ಟಕ್ಕೂ ಮನಗಳ ಮುಮ್ಮೇಳ ಕಾವೇರಿ ಕರಗಿತು ಅಂದು ಹರಡಿದ ವಸ್ತುಗಳ ಆಸ್ಥೆಯಿಂದ ಆಯ್ದುಕೊಂಡೆ ಮತ್ತೆಂದೂ ಸಿಗದಿರು ಎಂದು ಕೈ ಬೀಸಿ ಕಳುಹಿಸಿಕೊಟ್ಟೆ|| ಆದರಿಂದು ಕುತೂಹಲ ಬತ್ತದ ಒಡಲಿನಲ್ಲಿ ಕಥೆಯನ್ನು ಹಿಂತಿರುಗಿ ಶೋಧಿಸುತ್ತಿರುವೆ ಬೇರೆ ಬೇರೆಯಾಗಿ ಅನುವಾದಿಸುತ್ತಿರುವೆ! ಈ ವಿಚಿತ್ರ ವೈಖರಿಯ ಹಿಡಿದಿಡಲಾದೀತೆ? ನನ್ನಯ ಕಥೆಯ ನಾನೇ ಬಿಡಲಾದೀತೆ?