ವೈಖರಿ
ಬಟ್ಟ ಬಯಲಲಿ ನಿಂತೆ ನಾಳೆಗೆ ಬೆನ್ನು ಮಾಡಿ
ಎದುರು ನೋಡಲು ಕಾಲದಲ್ಲಿ ಹೂತ ನಿನ್ನೆಗಳ ನನ್ನ
ಹೇಳಿದೆ ನನಗೆ ನಾನು ನೂರಾರು ಗೊಡ್ಡು ಕಥೆಗಳ
ಕೇಳುಗನಾಗಿ ಅರ್ಪಿಸಿಕೊಂಡು ನನ್ನ ನಾನು ಕಳೆದುಕೊಳ್ಳುವಿಕೆಯಲ್ಲಿ||
ಅಸ್ಪಷ್ಟವಾಗಿ ಭಾಸವಾಗುತ್ತಿತ್ತು ಭಾವಗಳ ಮೇಳದಲ್ಲಿ ವಿಕ್ರಯಗೊಂಡಂತೆ
ಅಂದುಕೊಂಡೆ ತೂಗಿ ಅಳೆಯುತಿದ್ದೆ ಎಲ್ಲವ,ಎಲ್ಲದರ ಹೊರತಾಗಿ
ಮಂಥನಗೊಳ್ಳುತ್ತಿತ್ತು ದಿಂಬಿನಡಿಯಾದ ಅದೆಷ್ಟೋ ಪ್ರವರಗಳು
ತೆತ್ತಿದೆ ಬೆಲೆ ಎಲ್ಲವ ನನ್ನದೇ ಎಂದು ಬಿಗಿಯಾಗಿ ಹಿಡಿದು||
ನಿರ್ವಂಚನಾ ಪಾತ್ರವಾಗಿ ಜೀವಿಸಿದ್ದೆ ನಾನು ಅಂದು ಸ್ಪರ್ಶಕ್ಕೆ ಸಿಗದ ಕಲ್ಪನಾ ಲೋಕದಲ್ಲಿ
ಉಚ್ಚಾಯಮಾನವಾಗಿ ಕಂಗೊಳಿಸಿದೆ ಹುಣ್ಣಿಮೆಯ ಚಂದ್ರಮನಂತೆ
ಮರೆತೆ ನನಗೂ ಒಂದು ಸಾವಿದೆಯೆಂದು
ತೋರೆದೇ ಬಿಟ್ಟೆ ನಾನು ಪರ್ಯಾಯ ಬದುಕಿನ ಕನಸನ್ನು||
ಅಷ್ಟಕ್ಕೂ ಮನಗಳ ಮುಮ್ಮೇಳ ಕಾವೇರಿ ಕರಗಿತು
ಅಂದು ಹರಡಿದ ವಸ್ತುಗಳ ಆಸ್ಥೆಯಿಂದ ಆಯ್ದುಕೊಂಡೆ
ಮತ್ತೆಂದೂ ಸಿಗದಿರು ಎಂದು ಕೈ ಬೀಸಿ ಕಳುಹಿಸಿಕೊಟ್ಟೆ||
ಆದರಿಂದು ಕುತೂಹಲ ಬತ್ತದ ಒಡಲಿನಲ್ಲಿ ಕಥೆಯನ್ನು
ಹಿಂತಿರುಗಿ ಶೋಧಿಸುತ್ತಿರುವೆ
ಬೇರೆ ಬೇರೆಯಾಗಿ ಅನುವಾದಿಸುತ್ತಿರುವೆ!
ಈ ವಿಚಿತ್ರ ವೈಖರಿಯ ಹಿಡಿದಿಡಲಾದೀತೆ?
ನನ್ನಯ ಕಥೆಯ ನಾನೇ ಬಿಡಲಾದೀತೆ?
Comments
Post a Comment