ಅಪೂರ್ಣ ಕವಿತೆ
1.ಬೆಂಕಿಯಲ್ಲಿರುವ ಹಸಿಕಟ್ಟಿಗೆಯಾಗಬೇಕೆಂತಿದ್ದೆ!
ಆದರೆ ಹೃದಯವದು, ವಿರಹದುರಿಯ ಮುಂದೆ ಪ್ರೀತಿಯೆಂಬ ತೇವಾಂಶವಿಲ್ಲದೇ ಉರಿದುಹೋಯ್ತು!
ನನ್ನದಷ್ಟು ಒಣ ಒಲವೇ?
2. ಪ್ರೀತಿಯೋ ಹಠವೋ ನಾ ತಿಳಿಯೆ!
ಆತನೊಬ್ಬ ಪ್ರಶಾಂತ ಸಾಗರ!
ಆತನನ್ನು ಸೇರಲು ಕಾಯುತ್ತಿರುವ ಹತಾಶ ತೊರೆಯು ನಾನು!
3.ನೀನಿಲ್ಲವೆಂದು ತಿಳಿದಾಗ ಕ್ಷಣಮಾತ್ರದಲ್ಲಿ ಗಟ್ಟಿಯಾದ ಮನಸ್ಸು,ಕಾಲಾನಂತರದಲ್ಲಿ ತಿಳಿನೀರಿನಲ್ಲಿ ಕರಡಿದ ಮಣ್ಣಿನಂತಾಯಿತು!
4.ನಿನ್ನ ಸಂಕೋಚವೇ ಕಾಡುವುದು ವಿರಹಿಗೆ..
ಆ ಪೆದ್ದುಮುಖವೇ ರಾಚುವುದು ಕಂಗಳಿಗೆ!
5. ದಿನದಿನವೂ ಕಾಡುವ ಆತ ಅದೆಷ್ಟು ವಿಶೇಷನಾಗಿರಬಹುದು!
ಬೇಕೆಂದರೂ ಮುಗಿಸಲಾಗದ ಅಧ್ಯಾಯದ ಲೇಖಕನವನು!
6.ನೀನೆಲ್ಲಿ ಮಾತನಾಡುವೆಯೆಂಬ ಪುಟ್ಟ ಆಸೆ!
ಹಿಂದಿರುಗಿ ಮತ್ತೆಲ್ಲವ ಶುರುಮಾಡುವ ಕಾತರ!
ಈ ಆಸೆಯೊಂದಿಗೆ ದಿನವೂ ಶಶಿಯ ಕಾಣುವ ಅವಳಿಗೆ ನಿರಾಸೆ ಕಾದಿದ್ದಂತು ಸಹಜವೇ ಸರಿ!
7. ನೀನೆಂದರೆ ತುಟಿಯಂಚಲಿ ಮಿಂಚಿ ಮರೆಯಾಗುವ ನಗುವಿಗೆ ನೀನು ಸಹ್ಯ,ನಿನ್ನದೆಲ್ಲವೂ ಸಹ್ಯ!
ನನ್ನದಲ್ಲದ ನಿನ್ನದೂ ಸಹ್ಯ ಸಹ್ಯ!
8.ಹೇಳಲು ಭಯವಿಲ್ಲ!ಆದರೆ ಹೇಳಿದ ನಂತರ ಕಳೆದುಕೊಳ್ಳುವ ಭಯ! ನಿನ್ನನೂ ಜೊತೆಗೆ ನನ್ನನ್ನೂ ಕೂಡ!
9. ಮನಸ್ಸಿಗೂ ಒಂದು ಮನಸ್ಸಿರಬಹುದೆ?
ಅದಕ್ಕೂ ಮನಸ್ಸಾಗಬಲ್ಲದೇ?
ಮನಸ್ಸು ಮಾಡಿದರೂ ಮನಸ್ಸು ಒಪ್ಪುವುದಿಲ್ಲವಲ್ಲ ನಿನ್ನ ಮೇಲಿನ ಮನಸ್ಸ ಹಿಂಪಡೆಯಲು!
10. ಒಮ್ಮೆಯಾದರೂ ಇವೆಲ್ಲವ ನಿನಗೆ ಹೇಳುವಾಸೆ!
ಮನಸ್ಸಿನ ಕೂಗು ಕೇಳುವಂತಿದ್ದರೆ ನೀನು ಅದೆಷ್ಟು ಬಾರಿ ಹಿಂದಿರುಗಿ ನೋಡುತಿದ್ದೆಯೋ!
ಆದರೆ ಮನಸ್ಸು ಬಲಹೀನ!
ತಾಳ್ಮೆಯಲ್ಲೂ, ಶಕ್ತಿಯಲ್ಲೂ!
11.ನಿನ್ನೀ ಅಸ್ಪಷ್ಟ ನಿಲುವೇ ಪ್ರೇಮವೇ?
ಬಿರುಗಾಳಿಯಲ್ಲಿ ಬದುಕಿದ ದೀಪದಂತೆ ಭಾವನೆಗಳಿಂದು ಅಚಲ ವಾಗಿಲ್ಲ!
ಆ ಕೃಷ ದೀಪದ ಪ್ರಕಾಶದಿಂದ ನೋಡ ಬಯಸು ವುದು ನಿನ್ನ ನ್ನೇ ಎಂದು ನೀನು ಮರೆತಿರುವಾಗಿದೆ ಎಂಬುದನ್ನ ಸಾರಿ ಸಾರಿ ಹೇಳುತ್ತಿರುವ ದೀಪದ ಅಸ್ಮಿತೆ!
ಇದನ್ನರಿಯಲು ನಾ ಮಂದೆಯೋ ಹಠ ಮಾರಿಯೋ ಅರಿಯೆ!
12. ನಿಗೂಢ ನಡೆಯಿಂದ ದಾರಿ ತಪ್ಪಿಸುವವ ನೀನು!
ದಾರಿ ತಪ್ಪಲು ಅನಾಥ ಪ್ರೇಮವಿರುವಾಗ
ನಾ ಯಾಕೆ ಚಂಚಲೆಯಾದೆ ಎಂಬ ಪ್ರಶ್ನೆ!
13. ನಿನ್ನಿಂದ ಮನಸ್ಸು ತಲುಪಿದ ನಿರ್ಧಾರವಿಷ್ಟೇ
ಕಣ್ಣಿಲ್ಲದ ಊರಲ್ಲಿ ಜನಿಸುವ ಸೌಭಾಗ್ಯ ನನ್ನ ದ್ಯಾ ಕಾಗಿಲ್ಲವೆಂದು !
ಆದರೂ ಕಣ್ಣುಗಳಿಂದ ದಿಗ್ಭ್ರಾಂತಿಗೊಳಗಾಗಿದ್ದು ಹೊಸತೇನಲ್ಲ!
Comments
Post a Comment