ಮಾಯಾಜಿಂಕೆ-ಪ್ರೇಮ!
1.ನಿನ್ನ ಹೃದಯದ ಸಾಲ ಪಡೆದಿರುವ ನನಗೆ
ಅದನ್ನು ಹಿಂದಿರುಗಿಸುವ ಶಕ್ತಿಯಿದ್ದಿದರೆ
ನನ್ನ ಭಾವನೆಗಳಿಂದು ಪ್ರಥಮ ಮಳೆಯ ನವಿಲಿನ ಹಾಗೇ ಗರಿಬಿಚ್ಚಿ ಕುಣಿಯುತ್ತಿರಲಿಲ್ಲ!
2.ನಿನ್ನ ಬಗೆಗಿನ ಭಾವನೆಗಳನ್ನು ಚುಕ್ಕಿ ರೂಪದಲ್ಲಿ ಇಟ್ಟಾಗಿದೆ!
ಚುಕ್ಕಿ ಜೋಡಿಸಿ ಅದು ನೀನೆ ಎಂಬುದನ್ನು ನೀನು ತಿಳಿಯಬೇಕಾಗಿದೆ!
3. ಕಡೆಗೂ ಸೋಲಪ್ಪಿಕೊಂಡಿತು ಮನವು
ನೀನೆಂದು ಸಿಗಲಾರೆಯೆಂಬ ಸತ್ಯವ!
ಆದರೂ ಈ ಚಂಚಲ ಮನವು ನನ್ನ ಹಿಡಿತದಲ್ಲಿಲ್ಲ!
ಹಿಡಿತ ದಲ್ಲಿದ್ದರೂ ಸೋಲಿಸುವವವನು ನೀನಿರುವೆಯಲ್ಲ!
ಮನಸೋಲದೇ ದಿನದೂಡುವ ಸಂಧಿಗ್ನತೆ!
4. ಮನಸ್ಸಾಗಲು ಕಾರಣ ಬೇಕೆ?
ಮನಸ್ಸಿಗೆ ಆ ಕಾರಣವಿನ್ನು ತಿಳಿಯದಿದ್ದಾಗ
ನಿನ್ನ ಪ್ರಶ್ನಾರ್ಥಕ ಕಣ್ಣುಗಳಿಗೆ ನಾನು ಏನೆಂದು ಉತ್ತರಿಸಲಿ !
5. ನೀನಾರೆಂದು ನಿನಗೆ ತಿಳಿಯದಷ್ಟು ನಿನ್ನನ್ನು ನಾನು ಅರಿತಿರುವೆ!
ಹೇಳಲೊಂದು ಅವಕಾಶವ ನೀಡಿಬಿಡು!
ಮೇರುಗಿರಿಯಂತೆ ಬಿಗಿದಪ್ಪಿ ಶಾಶ್ವತಳಾಗುವೆ!
6. ದೂರವೇ ಹತ್ತಿರವೆಂಬ ಆಸೆಗಳಿಗೆ ಮನಸೋತು
ನಿನಗೆ ಹತ್ತಿರಳಾಗಿಹೆ ನಾನು!
ನಿನ್ನ ಸನಿಹ ದಲ್ಲಿಯೇ ಹುಚ್ಚು ಮನಸ್ಸು ಸುಳಿ ಯುತ್ತಿದೆ!
ಒಮ್ಮೆಯಾದರೂ ಮಾತನಾಡಿಸು!
7. ಕಣ್ಣೋ ಕೋಲ್ಮಿಂಚೋ ತಿಳಿಯದು!
ನಿನ್ನ ಒಂದು ನೋಟಕ್ಕೆ ಜಲ್ ಎನ್ನುತ್ತಿತ್ತು ಮನವು!
ಪದೇ ಪದೇ ಕಾತರಿಸುತಿತ್ತು ನಿನ್ನ ನೋಡಲು!
ಆದರೋ ನಿನ್ನ ಕಣ್ಣು ನನ್ನ ದೂರುತಿತ್ತು!
8.ಕ್ಷಣಮಾತ್ರದಲ್ಲಿ ಬದಲಾಗುವ ನಿನ್ನ ಬಗೆಗಿನ ಯೋಚನೆಗಳು ಹೃದಯದಲ್ಲಿ ಸುನಾಮಿಯುಂಟು ಮಾಡುತ್ತದೆ!
ಏಕೋ ಏನೋ ತಿಳಿಯದು!
ಇವೇ ನಿನ್ನ ಬಗ್ಗೆ ಯೋಚಿಸಲು ಮತ್ತಷ್ಟು ಪ್ರೇರೇ ಪಿಸುವವು!
9. ಹೃದಯವೆಂಬುದು ಗೋಜಲಿರಬಹುದು!
ಎಷ್ಟೆಂದು ತಿಳಿಯ ಹೊರಟರೂ ಕಳೆದು ಹೋಗುವ ಕತ್ತಲ ಕಾನು!
ಬಂದ ದ್ಯೆಯ ದರಿವಿಲ್ಲದೆಯೆ ದಾರಿ ಮುಗಿಯುತ್ತಿದೆ!
ಮತ್ತೆ ಹಿಂದಿರುಗಿ ಹೋಗಲೇ?
10. ಕಥೆಗಳೆಲ್ಲ ಜೀವನ ಅಲ್ಲವೆಂದುಕೊಂಡರೆ
ಆ ಕಥೆಗಳಿಗೆ ಸ್ಪೂರ್ತಿಯಿತ್ತವರಾರು?
ಕಥೆಯಾಗಿ ಹೋಗಲೆಂದು ಪಾತ್ರ ಧರಿಸಿದರೆ ಕಥಾ ನಾಯಕನಾಗಿರುವ ನೀನೇ ನಿಘೂಡನಾಗಿರುವೆ!
ಇಷ್ಟೊಂದು ತಿರುವುಗಳನ್ನು ತಿಳಿಯುವ ತಾಳ್ಮೆ ಕಳೆದು ಹೋಗುತ್ತಿದೆ ನಿನ್ನ ನೆನಪುಗಳಲ್ಲೇ !
11. ಯಾತಕ್ಕಿರಬಹುದು ನಿನ್ನ ಕುರಿತ ಬಣ್ಣದ ಜಗತ್ತಿನ ಸುಂದರ ಭ್ರಮೆಗಳು !
ನೀರ ಮೇಲಿನ ಗುಳ್ಳೆಗಳಂತಲ್ಲ ನನ್ನೀ ಪ್ರೇಮವೆಂದು ನಿನಗರಿವಾದರೂ ಕಾಲಮಿಂಚಿಹೋಗುವುದೆಲ್ಲ ಎಂಬ ಸತ್ಯ!
12. ಪ್ರತಿ ಕ್ಷಣ ಸುಳಿವ ನಿನ್ನ ನೆನಪುಗಳು ಮನಸ್ಸಿ ನಲ್ಲಿ ಸ್ಮಶಾನ ಮೌನ ವುಂಟು ಮಾಡಿದರೂ ನೆನಪುಗಳೇ ಸಹ್ಯವೆಂಬುವ ಹಠಮಾರಿ ಮನವು!
13.ಅದೆಷ್ಟೋ ಬಾರಿ ಹೇಳಬೇಕೆಂದಿದ್ದೆ ಅದು ನೀನೇ ಎ೦ದು
ಆದರೆ ಹುಚ್ಚು ಮನವು ನಾಚಿಕೆಯೋ ಭಯವೋ ಎಂಬ ದ್ವಂದ್ವದಲ್ಲಿ ಸಿಲುಕಿದೆ!
14 .ಪ್ರೇಮವೆಂಬುದೇನೆಂದು ಅರಿಯದೇ ಪ್ರೇಮ ಬಲವಾದ ಘಳಿಗೆಯಲ್ಲಿ ಬಣ್ಣದ ಚಿಟ್ಟೆಯಂತೆ ನೀ ಹಾರಿ ಹೋದಾಗ ಕೈಯಲ್ಲಿ ಕೇವಲ ವಿರಹದ ಬಣ್ಣವುಂಟಷ್ಟೇ!
15.ಕವಿತೆಗಳಲ್ಲಷ್ಟೆ ಜೀವ ಪಡೆಯುವ ನಿನಗೆ ನಿನ್ನ ಕುರಿತ ಜೀವ ವಿಲ್ಲದ ಬರಹಗಳ ಬೆಲೆ ಹೇಗೆ ತಿಳಿವುದು?
16. ಅಮಾವಾಸ್ಯೆಯಲ್ಲೂ ಪೌರ್ಣಿಮೆಯನ್ನು ಕಾಣ ಬಯಸುವ ನನಗೆ ಚಂದಿರನಲ್ಲಿರುವ ನೂನ್ಯತೆಗಳು ಕಾಣುತ್ತಿಲ್ಲ!ಚಂದ್ರನ ಒರೇಖೋರೆಗಳೂ ಸುಂದರ ರೇಖೆಗಳೇ!
17.ಮಣ್ಣಿನ ಗೊಂಬೆಯನ್ನು ಮಳೆಯಲ್ಲಿಟ್ಟು ಮಣ್ಣಾಗೆಂದು ಹೇಳಿದರೆ ಅದಾಗದೇ ಹೋದಿತೆ ?
ನಿನ್ನ ಸನಿಹಕೆ ಬಂದು ನಿನ್ನಲ್ಲಿ ನಾನಾಗ ಬೇಕಂದರೆ ಅದರ ಮೂಲವ ಅದು ಸೇರಿತೇ?
18.ಹೋಗಲಿ ಬಿಡು ಎನ್ನುವ ಮನ
ಸಮ್ಮತಿಯಿಲ್ಲದ ಹೃದಯದ ಸಾಂತ್ವನ
ಒಮ್ಮೆ ಮಾತನಾಡಿಸಿಬಿಡು ಎಂಬ ಮಂಥನ
ಇವೆಲ್ಲದರ ಮಧ್ಯೆ ಆಕೆ ದಿಕ್ಕು ತೋಚದೇ ನಿಂತಿದ್ದಳು!
19. ಮನಸ್ಸೆಂಬ ನದಿಯು ಸೇರಬೇಕಾದುದು ವಿಧಿಯೆಂಬ ಶರಧಿಯೇ!
ಎಷ್ಟೆಂದು ಪ್ರಯತ್ನಿಸಲಿ ಅದರ ಹರಿವು ಬದಲಿಸಲು!
ನಿನ್ನ ನೆನಪಿನ ಆಣೆಕಟ್ಟುಗಳೆಲ್ಲ ರಭಸದ ನೀರಿನಲ್ಲಿ ಕೈಗೆಟುಕದ ಹಾಗೇ ಬಳಿದುಕೊಂಡು ಹೋಗುವಾಗ ದಡದಲ್ಲಿ ನಿಲ್ಲುವ ಮೂಕಪ್ರೇಕ್ಷಕಿ ನಾನು!
20.ಬಹುಶಃ ರಾಧೆಯಂತಹ ಮನಸ್ಥಿತಿ ನನ್ನದು!
ನಿನ್ನೀ ನಿರ್ಲಕ್ಷ್ಯವೂ ನನ್ನ ಭಾವನೆಗಳಿಗೆ ಮತ್ತಷ್ಟು ಗರಿಬಿಚ್ಚಿ ಕುಣಿಯುವಂತೆ ಮಾಡುತ್ತಿದೆ!
ಗೆಳೆಯ ಹೇಳಿಬಿಡುವೆನು, ನಾನಾಗಲಾರೆ ರಾಧೆ!
Comments
Post a Comment