ರಾತ್ರಿಯೆಂಬ ಶಾಪ 💔

ರಾತ್ರಿ ನಿಶ್ಯಬ್ಧ- ಶೀತ - ನೆಮ್ಮದಿಯ ಸಮಾನಾರ್ಥಕ ಎಂಬುದು ಲೋಕಾರೂಢಿ! ಎಲ್ಲರೂ ನೆಮ್ಮದಿಯ ನಿಟ್ಟುಸಿರು ಬಿಡಲು ಎದುರು ನೋಡುವ ಪರ್ವಕಾಲ!ಆದರೆ ಹೃದಯದಾಳದಲ್ಲಿ ಸ್ಮಶಾನವೊಂದು ಮನೆಮಾಡಿ ಕೇಕೆ ಹಾಕುವಾಗ ರಾತ್ರಿ ಒಂದು ಸುಂದರ ಶಾಪ!
ದಿನಪೂರ್ತಿ ಕೆಲಸ - ಕಾರ್ಯಗಳಲ್ಲಿ ಮಗ್ನನಾದ ಆತನು ತನ್ನ ಮನಸ್ಸನ್ನು ಮೂಲೆಯಲ್ಲಿ ಕೈಕಟ್ಟಿ ಕುಳಿಸುತ್ತಾನೆ!ಬಹುಶಃ ಅದೇ ಸಿಟ್ಟು,ದ್ವೇಷ,ಅಸಹನೆ,ಅಭದ್ರತೆ ಆ ಮನಸ್ಸಿಗೆ!ಅದರ ಅಪರಿಮಿತೆಯ ಅದೇ ಬಲ್ಲದು!ರಾತ್ರಿ ಯಾದೊಡೆ ಮನಸ್ಸಿನ ಹಗೆ ಅದೇ ಮನಸ್ಸ ಮೇಲೆ! ಎಂದೂ ನಿಲ್ಲದ ಸಮರಸ.
ನಿದ್ರೆ ಎಲ್ಲದಕ್ಕೂ ಮದ್ದಂತೆ!ನೋವ ಮರೆಸಲು!ಆದರೆ ದ್ವೇಷಕ್ಕೆ ನಿದ್ರೆಯ ಮೇಲೆ ಮತ್ಸರವಂತೆ! ಏಕೆಂದರೆ ಕೊನೆಗೂ ತಾನೆಲ್ಲಿ ಅನಾಥನಾಗುವೆನೆಂಬ ಮತ್ತದೇ ಅಭದ್ರತೆ! ಆದರೂ ಮನಸ್ಸು ನಿದ್ರೆಯನ್ನು ದೇಹದ ಚೌಕಟ್ಟಿನಲ್ಲಿ ನಿಲ್ಲಿಸಿ ಮೇಲುಗೈ ಸಾಧಿಸಿಯೇ ಬಿಡ್ತು!ಮನಸ್ಸೊಂದು ಮೂರು ವರ್ಷದ ಮಗುವೆಂದರೆ ತಪ್ಪಾಗಲಿಕ್ಕಿಲ್ಲ! ದುಃಖ, ಸುಖ ಎರಡನ್ನೂ ಅದ್ಧೂರಿಯಾಗೇ ವ್ಯಕ್ತಪಡಿಸುತ್ತೆ! ಕಾರಣ ದಿನವಿಡೀ ಸುಮ್ಮನೆ ಕುಳಿತ ಸಿಹಿಯಾದ ಸಿಟ್ಟು!ಆದರೂ ದುಃಖವನ್ನು ತುಸು ಚೆನ್ನಾಗಿಯೇ ಅವಿರತಗೊಳಿಸುವ ಕಲೆ!
ಮನಸ್ಸು ದಿನಚರಿಯಂತೆ!ಇಂದಿನ ದಿನದ ಆರಂಭಕ್ಕೆ  ನಿನ್ನೆಯೂ ಬೇಕು,ಬರದ ನಾಳೆಯೂ ಬೇಕು.
ಆದರೂ ರಾತ್ರಿಯ ಮೌನದಲ್ಲಿ ಮನದ ಗೋಡೆಗಳಲ್ಲಿ ಪ್ರತಿದ್ವನಿಸುವುದು ಕಳೆದ ದಿನಗಳ ದುರಂತ ಹಾಗೂ ಅರಿಯದ ನಾಳೆಗಳ ಆತಂಕ!
ಕಿವಿಗಚ್ಚುವ ಜಗದ ಗಲಾಟೆಗಳಿಗಿಂತ  ಭೀಭತ್ಸ, ಭೀಕರ ವಾದುದು ನೀರವ ಮೌನ! ಬೇಡವೆಂದರೂ ಕೈಗಳಿಗೆ ಬೇಡಿಗಳ ತೊಡಿಸಿ ಭಾವನೆಗಳ ಸಂತೆಯಲ್ಲಿ ಹರಾಜಿಗೆ ಇಡುವ ಶಕ್ತಿ ಮಾತ್ರ ಮನಸ್ಸು ಪಡೆಯುವುದು ರಾತ್ರಿಯಲ್ಲಿಯೆ!
ಮನಸ್ಸು ಕೇಳುವುದು ಒಂದೇ ಒಂದು ಪ್ರಶ್ನೆ!ರಾತ್ರಿಯ ಕಡುಗತ್ತಲಂತೆ ನಂಗಿಷ್ಟು ಯಾಕೆ ವೇದನೆಯ ನೀಡಿದೆಯೆಂದು!ಆದರೆ ಅದರ ಕಾರಣವೇ ತಾನೆಂದು ಅದಿನ್ನೂ ತಿಳಿದಿಲ್ಲ!ಅದನ್ನು ಹೇಳಿ ಬೇಸರ ಪಡಿಸುವ ಉದ್ದೇಶ ನನ್ನದಲ್ಲ!
ಆದರೂ ಮನಸ್ಸಿನ ಮೂಕ ವೇದನೆಗೆ ರಾತ್ರಿ ಎಂಬುದು ಒಳ್ಳೆಯ ವೇದಿಕೆಯ ಸಜ್ಜು ಮಾಡಿದೆ!ಬಂದು ಮರೆಯಾದ ಅದೆಷ್ಟೋ ಪಾತ್ರಗಳು, ಅದೆಷ್ಟೋ ಕಥೆಗಳು,ಅದೆಷ್ಟೋ ಕವಲುಗಳು!ಎಲ್ಲವನ್ನೂ ಬರಮಾಡಿದ ಮನಸ್ಸು ಆಗೂ ತಬ್ಬಲಿ,ಈಗೂ ತಬ್ಬಲಿ!
ನಮ್ಮದಲ್ಲದ ನೋವ ಮನಸ್ಸಿಗೆ ನೀಡಿದ ನಾವು ಈಗ ಅದರ ರೋಧನೆಗೂ ಒಂದು ಕಿವಿ ನೀಡಬೇಕಲ್ಲ!
ಆದರೂ ನಮ್ಮ ಕಥೆಯ ಜಗದ ಮುಂದೆ ವರ್ಣಿಸುವಾಗ ಒಂದು ನಾವೇ ನಾಯಕ ಅಥವಾ ನಾವೇ ಬಲಿಪಶು!
ಹೀಗೆ ಯಾರನ್ನೂ ದೂರಲಾಗದೇ ಮನಸ್ಸು ಬೇಸರಗೊಂಡು ನಿದ್ರೆಗೆ ಜಾರಿತಂತೆ! ಇತ್ತ ನಾವೂ ಕೂಡ ನಮ್ಮ ಕಥೆಯಲ್ಲಿ ರಾತ್ರಿಗೆ ಹಿಡಿಶಾಪ ಹಾಕುತ್ತಾ ಮರುದಿನವ ಬರಕಾಯುವುದು ನಿರಂತರ!
ಹಾಗೇ ನಿರುತ್ತರ!

Comments

Popular posts from this blog

ಇಷ್ಟಪಡೋದಾ?? ಇಷ್ಟವಾಗೋದಾ?

ಮಬ್ಬು

ಆಂತರ್ಯ