ಉದ್ದೇಶಿತ ನಾಮಕರಣ!
ಕೆಲವೊಂದು ಆಕರ್ಷಣೆಗಳೇ ಹಾಗೇ!ಮನದಾಳದಲ್ಲಿ ಸುನಾಮಿ ಉಂಟುಮಾಡಿ ಮೌನಧ್ಯಾನಕ್ಕೆ ಶರಣಾಗುತ್ತವೆ! ಆದರೂ ಕಣ್ಣಿಗೆ ಹಿತವೆನಿಸಿದ್ದೆಲ್ಲ ಬೇಕು!ಬಹುಪಾಲು ಹಠ ಉಸಿರ ಕಟ್ಟಿಸಿ ತಾನೇ ಮೇಲುಗೈ ಸಾಧಿಸಿ ಆಕರ್ಷಣೆಗೆ ಹೊಸ ಹೆಸರಿಡುವ ಉದ್ದೇಶಕ್ಕೆ ಅಣಿ ಮಾಡುತ್ತದೆ!
ಅದೇ ಉದ್ದೇಶಿತ ನಾಮಕರಣ.. ವಸ್ತುಗಳನ್ನಾಗಲಿ,ಮನುಷ್ಯರನ್ನಾಗಲಿ ಕಳೆದುಕೊಳ್ಳುವ ಹಂತದಲ್ಲಿ ಇರದ ಮನಸ್ಸು ತಿಳಿ ಪರದೆಯಂತೆ ಸೂಕ್ಷ್ಮ!
ಭಾವನೆಗಳ ಕೊಂದು ಕೊಂಡಾದರೂ ಸೈ,ಒಲವನ್ನು ಜಯದ ದಡವ ತಲುಪಿಸುವ ಪುಟ್ಟ ಯತ್ನ! ಈ ಯತ್ನದಲ್ಲಿ ಕೊಂಡಿಗಳೆಂದರೆ ಒಲವ ಒಡೆಯ/ಒಡತಿಯರು!ಅವರನ್ನು ಕಳೆದುಕೊಳ್ಳಲು ಎಂದಿಗೂ ಸಿದ್ದರಲ್ಲದ ನಾವುಗಳು.. ಓಡೋ ಸಮಯದ ಮೇಲೆ ಅದೇನೋ ಹುಚ್ಚು ಭರವಸೆ!ಬಹುಪಾಲು ನಾಳೆ ಯಾದರೂ ದೊರಕಬಹುದೋ ಎಂಬ ಹುಳಿ ದ್ರಾಕ್ಷಿ ಯಂತಹ ಗುರಿ!
ಆದರೂ ಯತ್ನ ನಿರಂತರ..ಅವರುಗಳ ಮನವೆಂಬ ಆಗಸ ತಲುಪಲು ಹತ್ತದ ಏಣಿಗಳಿಲ್ಲ!ಇದರರಿವು ಆಗ ತಾನೇ ಪ್ರೇಮದಲ್ಲಿ ಬಿದ್ದಿರುವವರಿಗೆ ಹೊಸದೇನಲ್ಲ!ಸಂಬಂಧಗಳ ಉಳಿಸಲು ಮನಸ್ಸಿಗೆ ಮಸಿಯ ಲೇಪನ!
ಏನೆಂದು ಬಣ್ಣಿಸಲಿ ಈ ಬಂಧವ ಎಂದು ತಡಕಾಡುವಾಗ ಉದ್ದೇಶಪೂರ್ವಕವಾಗಿ ಭ್ರಮೆಯ ನಾಮಕರಣ ವೊಂದು ನಡೆದೆಹೋಗುತ್ತದೆ!ಈ ಭ್ರಮೆ ತಪ್ಪೇನಲ್ಲ!ಹೊಸ ಬೆಸುಗೆಗಳ ಭದ್ರ ಬುನಾದಿ..ಹಾಗೆಯೇ ಕಹಿ ನೆನಪುಗಳ ಆದಿ ಕೂಡ ಆಗಬಹುದು!
ಉದ್ದೇಶ ತಲುಪಲು ಈ ಕಲ್ಪನೆಯ ಹಾಯಿದೋಣಿಯಲ್ಲಿ ಕಾಲ ಕಾಲಕ್ಕೆ ಪ್ರೀತಿಯ ಹುಟ್ಟು ಬೀಳುವುದು ಬಹುಮುಖ್ಯ!
ಆದರೂ "Everything is fair in love and war"ಅನ್ನೋದು ತಪ್ಪು ಎನ್ನುವ ಹುಂಬತನ ಇನ್ನೂ ಬಂದಿಲ್ಲ..
ಕೆಲವೊಮ್ಮೆ ಅನಿಸುವುದಿಷ್ಟೆ.. ಹೆಸರೇನಾದರೇನು?ಭಾವ ಮುಖ್ಯ,ಆಸೆ ಮುಖ್ಯ! ಎಲ್ಲದರಲ್ಲೂ ತರ್ಕವ ಹುಡುಕಲಾದೀತೆ?
ಅಂತ್ಯದಲ್ಲಿ ಜಯ ದುರ್ಬಲ ಮನಸ್ಸಿನದೇ!
Comments
Post a Comment