ಸಮಾನಾಂತರ ಜಗತ್ತು
ಒಮ್ಮೆ ನಿಲ್ಲೋಣ!ನಾಲ್ಕು ಹೆಜ್ಜೆ ಹಿಂದೆ ಹೋಗಿ ಮತ್ತೊಮ್ಮೆ ಪರಿಶೀಲಿಸಿದಾಗ ಗೋಚರವಾದ ಅವಿತಿದ್ದ ಸತ್ಯವೆಂದರೆ ನಮ್ಮಯ ಪ್ರಪಂಚಗಳು ಬೇರೆಯೆಂದು!
ಎಂದಿಗಾದರೂ ಹೊಸ ಪರಿಚಯವಾದಾಗ ಮನಸ್ಸು ಬಯಸುವುದು,ಮಾಡುವುದು ನೀರ ಮೇಲಿನ ಗುಳ್ಳೆ ಯಂತಹ ನಾಳಿನ ಭಗ್ನ ಕಲ್ಪನೆಗಳ!ಒಂದು ಕ್ಷಣ ಯೋಚಿಸ ಬೇಕಾದುದು "ಅವರ" ಅಸ್ತಿತ್ವವೇ ಇಲ್ಲದ ಪೂರ್ವವ!
ಹಾ ,ಹೌದು!ಅವರಿಲ್ಲದ ಒಂದು ಜಗತ್ತ್ತುಇತ್ತು. ನಾವಿಲ್ಲದ ಅವರ ಜಗತ್ತೂ ಇತ್ತು.ಬೇರೆಡೆಗೆ..ಅವರೊಳಗೆ ಹಾಗೂ ನಮ್ಮೊಳಗೆ..ಖುಷಿ,ದುಃಖ,ಸಹನೆ ಎಲ್ಲವೂ ಹಾಸು ಹೊಕ್ಕಿತ್ತು.. ಎಲ್ಲರೊಳಗೂ.. ಎಲ್ಲೆಲ್ಲಿಯೂ.. ಆದರೂ ಬದುಕು ಸಾಗುತ್ತಿತ್ತು..ಸಮಾನಾಂತರವಾಗಿ...ಗತಿ ಸ್ಥಿತಿ ಬೇರೆಯೇ ಇದ್ದರೂ ಹಗಲು,ರಾತ್ರಿ ನಿನ್ನೆ ನಾಳೆಗಳು ಮತ್ತದೇ ಸಮಾನಾಂತರ ರೇಖೆಯಲ್ಲಿ ಸಾಗುತ್ತಿತ್ತು!
ಬಹುಶಃ ಇವೆಲ್ಲದರ ಪರಿಚಯವಿಲ್ಲದ ವಿಧಿಯೊಂದು ಆ ಜಗತ್ತುಗಳ ಒಂದು ಮಾಡಲು ಯತ್ನಿಸುತ್ತಿತ್ತು!ಆದರೆ ಸಮಾನಾಂತರ ರೇಖೆಗಳು ಕೂಡಬಲ್ಲವೆ ಎಂದಿಗಾದರೂ?
ಪ್ರಸ್ತುತಕ್ಕೆ ಬಂದರೆ ಇವೆಲ್ಲವ ನಾವೆಂದಾದರೂ ಪರಿಗಣಿಸಿದ್ದೇವಾ ಎಂಬ ಪ್ರಶ್ನೆ ಕ್ಷಣ ಕ್ಷಣಕ್ಕೂ ಕಿತ್ತು ತಿನ್ನುತ್ತಿದೆ!ಅವರಿಲ್ಲದ ಬದುಕ ದೂಡುತ್ತಿದ್ದ ನಮಗೆ ಅವರಿಲ್ಲದ ದಿನದ ಭಯ ಕಾಡುವುದೇಕೆ?
ನಿಜಕ್ಕೂ ಅವರಿಲ್ಲದ ಜಾಗವೊಂದು ನಮ್ಮ ಬದುಕಲ್ಲಿ ಜೀವ ಪಡೆದಿತ್ತೆ?ಈಗ ನಮ್ಮ ಬದುಕು ಅವರಿಲ್ಲದೇ ನಿರರ್ಥಕವೇ?ಅಥವಾ ಈ ಪ್ರಶ್ನೆಯೇ ಅಪ್ರಸ್ತುತವೇ? ಹೀಗೆ ಹಲವಾರು ಪ್ರಶ್ನೆಗಳ ಬೆನ್ನು ಬಿದ್ದವಳಿಗೆ ಸಿಕ್ಕಿದ್ದು ನಿರುತ್ತರ! ಎಂದೂ ಬಿಡಿಸಲಾಗದ ಹೊರಬರಲು ಆಗದ ಯೋಚನೆಗಳ ಸುಳಿಯಲ್ಲಿ ಭದ್ರ ಸ್ಥಾನ ಹೊಂದುವ ಲಕ್ಷಣ!
ಅವರುಗಳಿಲ್ಲದ ಬದುಕು ಶೂನ್ಯವಾಗಿರಲಿಲ್ಲ! ಶೂನ್ಯವೂ ಅಲ್ಲ! ಇದ ಬರೆಯುವಾಗ ವಿರೋಧಿಸುವ ವಿದ್ರೋಹಿ ಮನ! ಸಮಾನಾಂತರ ರೇಖೆಗಳ ನಡುವೆ ಅಂತರ ಎಷ್ಟೇ ಆಗಿರಲಿ..ಅವು ಸಾಗುವುದು ಒಂದೇ ಹದದಲ್ಲಿ!ನಾವಿಲ್ಲಿ ನಮ್ಮ ಜಗತ್ತ ಪರಿವೇ ಇಲ್ಲದೆ ಇಲ್ಲೆ ಕುಳಿತು ಅವರ ಜಗವ ನೋಡಬಹುದೆಂಬ ತುತ್ತತುದಿಯ ಯೋಚನೆ! ಇದರರಿವಿಲ್ಲದೇ ಸಾಗುವ ಅವರ ಪ್ರಪಂಚ! ಹೀಗೆ ಸಮಾನಾಂತರ ಜಗತ್ತುಗಳು ಎಂದೂ ಸಂಧಿಸದೇ ಒಂದಾದವೆಂದರೆ ಲೇಖನಕ್ಕೊಂದು ಸುಂದರ ಅಂತ್ಯ ದೊರಕೀತೆ?
Comments
Post a Comment