ನಾನಾರು?...ಹುಡುಕಲೇ ಹೊರಗೆ?
ನಾನೊಬ್ಬ ದಿನಗೂಲಿ ನಾವಿಕನಂತೆ! ಎರಡು ದಡಗಳ ನಡುವಿನ ಪಯಣ ... ಆ ಪಯಣಗಳಲ್ಲಿ ಸರಿಯಾಗಿ ಬೆರೆಯದೆ ಪಸರಿಸುವ ಅದೆಷ್ಟೋ ಬಣ್ಣಗಳು! ಅದನ್ನೆಲ್ಲ ಮೈ ಸೋಕಿಸಿಕೊಂಡು ತನ್ನನ್ನು ತಾನೇ ಮರೆತು ಜೀವಂತ ಶವದಂತೆ ಬದುಕುವ ನಾನು! ಕೊನೆಗೂ ಪ್ರಯತ್ನ ನಿರಂತರ ಎಂಬಂತೆ ಮೈ ಕೊಳೆ ತೊಳೆದರೂ ಎಲ್ಲೋ ಸೆರೆಸಿಕ್ಕ ಸೈನಿಕ ನಂತಿರುವ ಸುಪ್ತ ಮನಸ್ಸಿನ ಸ್ನಿಗ್ಧ ಭಾಗಗಳು!
ಬಹುಶಃ ಎಂದಿಗೂ ನಿಖರವಾದ ಉತ್ತರ ಸಿಗದ ಪ್ರಶ್ನೆ ಎಂದರೆ ಅದು ನಾನ್ಯಾರೆಂದು! ಕೆಲವೊಮ್ಮೆ ಬೆಳಕ ಹಿಡಿದು ಹೊರಗೆ ಹಂಚಿ ಚೂರಾಗಿರುವ ವ್ಯಕ್ತಿ ಗಳ ಮನದಲ್ಲಿ ನೆಲೆಸಿರುವ ನನ್ನ ವ್ಯಕ್ತಿತ್ವಗಳ ಹುಡುಕಿ ತರಲೇ ಎಂಬ ಅಸಹಾಯಕತೆ! ನನ್ನನ್ನೇ ನಾನು ಕಂಡುಕೊಳ್ಳುವ ಪ್ರಯತ್ನ ಅವಿರತ!
ಕೆಲವೊಮ್ಮೆ ತಳವಿಲ್ಲದ ತಳಮಳವೆಂದೆನಿಸಿದರೂ ಭಾಗಶಃ ಅನಿಸಿಕೆಯೇ ತಪ್ಪೆಂಬ ಹಿಂಜರಿಕೆ ಯೊಂದು ನನ್ನಲ್ಲೇ ಟಿಸಿಲೊಡೆದಿತ್ತು! ಇನ್ನೂ ಹಲವೊಮ್ಮೆ ಬಹುಶಃ ನನ್ನಂತೆ ಅಂಧ ದಾರಿಹೋಕರು ಇದ್ದರೂ ಇರಬಹುದೆಂಬ ಒಣ ಆಸೆ!
ಇದೆಲ್ಲ ಇದ್ದರೂ ಇರಬಹುದು.. ಅವರವರ ಮನದಂಗಳದಲ್ಲಿ ಮನೆಮಾಡಿದ ಭಾವನೆಗಳ ನೋಡಿ ದವರಾರು?
ನನ್ನ ಕಥೆಯಲ್ಲಿ ಮುಖ್ಯ ಭೂಮಿಕೆಯ ಪಾತ್ರಧಾರಿ ನಾನು.. ಹಾಗೆಯೇ ಬೇರೆಯವರ ಕಥೆ ಗಳಲ್ಲಿ ವೇಷ ಧರಿಸಿ ಪಾತ್ರ ಗೋಸ್ಕರ ಕಾದು ಎಂದೂ ಪಾತ್ರ ನಿರ್ವಹಿಸದೇ ಇರುವ ಕಲಾವಿದನೂ ಆಗಿರ ಬಹುದು!
ಕೆಲವೊಮ್ಮೆ ಉಸಿರು ಗಟ್ಟಿಸುವ ನಗು.. ಇನ್ನೂ ಕೆಲವೊಮ್ಮೆ ನಿಟ್ಟುಸಿರ ಬಿಡಲಾಗದ ದುಃಖ.. ಇವೆಲ್ಲವ ನೋಡುವ ಗೋಡೆಯ ಮೇಲಿನ ತೂಗುಗನ್ನಡಿ! ನನ್ನೆಲ್ಲ ವ್ಯಕ್ತಿತ್ವಗಳ ನನಗೆ ತಿಳಿಸುವ ಅದರ ಪ್ರಯತ್ನ ಅಚಲ! ನನ್ನೊಡನೆ ನಕ್ಕಿ, ನನ್ನೊಡನೆ ಅತ್ತು ಕಲ್ಲಂತೆ ಇಂದಿಗೂ ಯಾವುದೋ ಮೂಲೆಯಲ್ಲಿ ನನ್ನ ಕಾಯುತ್ತಿರುವ ಕನ್ನಡಿ!
ಹೀಗೆ ಕಣ್ಣಮುಂದೆ ಸುಳಿದೂ ನನ್ನನ್ನೇ ದಿಟ್ಟಿಸಿ ನೋಡಿದರೂ ನಾನಾರು ಎಂಬ ಅರಿವಾಗದ ಗೋಜಲುಗಳು! ಹೀಗೆ ಎಂದೋ ಹರಿದು ಚೂರಾದ ಚೂರುಗಳನ್ನು ಒಟ್ಟು ಗೂಡಿಸಿ ' ನಾನೆಂಬ ' ಪೂರ್ಣ ಚಿತ್ರವ ನೋಡುವತ್ತ ಧ್ಯೇಯ!
Comments
Post a Comment