ಮೌನಿ
ಹೇಳಬೇಕೆಂದರೆ ವ್ಯತ್ಯಾಸವಿಷ್ಟೇ!ಆತನೊಬ್ಬ ನದಿ.ನಾನೊಂದು ಶರಧಿ!ಆತನಿಂದ ಹೇಳಿದ್ದಕ್ಕೂ, ನೀಡಿ ದಕ್ಕೂ ಪ್ರತ್ಯುತ್ತರ ಹಾಗೂ ಸ್ಪಂದನ ಬರುವುದು ಊಹಿಸಲಸಾಧ್ಯವಾದ ಪ್ರಕ್ರಿಯೆ!ಮಂದರೀತಿಯ ಹರಿವು ಅವನದ್ದು!
ಆದರೆ ನಾನೊಂದು ಭೋರ್ಗರೆವ ಶರಧಿ! ಯಾವಾಗಲೂ ಜೀವಂತ! ಸ್ಪಂದನೆ - ಭಾವನೆಗಳು ತುಸು ಹೆಚ್ಚೇ!ಆತನ ಗತಿಗೆ ಹೊಂದಿಕೊಳ್ಳಲು ಅಸಾಧ್ಯವಾದ ಬರತ!ಆದರೂ ಶರಧಿ ನಾನು! ಆತನೆಂದು ಸೇರುವನೆಂದು ಬರಕಾಯುವ ಬೆಕ್ಕಸ ಕಣ್ಣ ಬೆಡಗಿ!
ಚಿಕ್ಕವರಿರುವಾಗ ಜಾತ್ರೆಯಲ್ಲಿ ಕಣ್ಣಿಗೆ ಚಂದವೆನಿಸಿದ್ದೆಲ್ಲ ಬೇಕು!ಅಮ್ಮನ ಕಿರುಬೆರಳು ಹಿಡಿದು ನಿಂತಿದ್ದು ಸುಳ್ಳಲ್ಲ! ಕಣ್ಣಂಚಿನಲ್ಲಿ ನೀರು ಜಿನುಗಿದರೂ ಅಮ್ಮ ಎಲ್ಲಿ ಅದನ್ನು ಕೊಡಿಸುವಳೋ ಎಂಬ ಪುಟ್ಟ ಆಸೆ! ಆದರೆ ಅಮ್ಮ ಕಣ್ಣು ಕಟ್ಟುವ ವಿದ್ಯೆಯಲ್ಲಿ ಪರಿಣಿತೆ ! ಚೆಂದನೆಯ ಮಾತಿನಲ್ಲಿ ಮನಾಯಿಸಿದಳು! ಇಂದು ಆ ಜಾಗದಲ್ಲಿ ಇರುವವ ಆತ! ಆತನ ಬಗೆಯ ಪ್ರೀತಿಯೇ ಅಂದಿನ ಬಾಲ್ಯದ ಆ ಆಟಿಕೆಗಳು! ಒಲವಂಗಡಿಯ ಮಾಲೀಕನೂ ಆತನೇ... ವಿರಹದಂಗಡಿ ಒಡೆಯನೂ ಅವನೇ ! ಎಲ್ಲವ ಹೇಳಿ ಮತ್ತೇನೋ ಕೇಳುವ ಬಯಕೆಯನ್ನು ಮರೆಸುವವನು ಅವನೇ !
ಆತ ಕಡು ಮೌನಿ ! ಮಾತನ್ನರಸಿ ಹೋದವಳಿಗೆ ಸಿಕ್ಕಿದ್ದು ಮೌನ! ಮೌನವೆಂಬುದು ಕ್ಲಿಷ್ಟ ಕರ! ಎಲ್ಲರಿಗೂ ಅವರವರ ಯೋಚನೆಯೇ ಸರಿಯೆಂದು ಪುಷ್ಟಿ ನೀಡುವ ಮದ್ದು!ಅವರವರ ಕಲ್ಪನೆಯೆಂಬ ಗಾಳಿ ಗೋಪುರಕ್ಕೆ ಆಧಾರ ಸ್ಥಂಭ!ಮೌನಕ್ಕೆ ಹಲವಾರು ಅರ್ಥ!ಅವರವರು ಅವರವರಿಗಿಷ್ಟವಾದ ರೀತಿಯಲ್ಲಿ ಇಚ್ಚಾನುಸಾರ ಜೀರ್ಣಿಸಿಕೊಳ್ಳುವ ಖಾದ್ಯ!
ಹೀಗೆ ಆತನಿಂದ ಉತ್ತರ ಬಯಸುತ್ತ ಅದೆಷ್ಟೋ ಪ್ರಶ್ನೆಗಳನ್ನ ಅವನೆದುರಿಗೆ ಹೂತುಹಾಕಿ ಅವುಗಳಿಗೆ ನನ್ನ ಮನದಂಗಳದಲ್ಲಿ ಚಿರಂಜೀವಿ ಪಟ್ಟಕ್ಕೆರಿಸ್ತಾ ಇದೀನಿ!
ಕ್ಷಣ ಕ್ಷಣಕ್ಕೂ ಸುಳ್ಳನ್ನ ಹೇಳಿ, ಸುಳ್ಳಲ್ಲಿ ಬದುಕಿ, ಸುಳ್ಳನ್ನ ಬಯಸೋ ನನಗೆ ಆ ಸುಳ್ಳನ್ನು ಸಾಯಿಸಿ ಸತ್ಯ ಹುಡುಕಿ ಹೊರಡೋಕೆ ತುಂಬ ಭಯ!ಯಾಕೆಂದ್ರೆ ಆ ಸುಳ್ಳುನ್ನು ಕೂಡ ಹಚ್ಚಿಕೊಂಡಾಗಿದೆ!
ಹಾಗಂತ ಅವನಿಗೋಸ್ಕರ ಅವನ ಮೇಲಿನ ಭಾವನೆಗಳ ತಿರುಚಿ ಹೇಳುವ ಸಾಂದರ್ಭಿಕ ಸುಳ್ಳು ಬಹುಶಃ ಸುಳ್ಳಲ್ಲ!
ಒಟ್ಟಿನಲ್ಲಿ ಮಾತಿನ ಮನೆಯಲ್ಲಿ ಮೌನ ದಾಸಿಗೆಯಲ್ಲಿ ಮಲಗಿ ಮರಳಿ ಮರಳಿ ಮರೀಚಿಕೆ ಯಾಗುವ ಮಂಥನವೆಂದರೆ ಆತನ ಮಾತು ಹಾಗೂ ಮೌನಗಳೇ....
Comments
Post a Comment