ಪಾಪಿ ದಿಲ್
1.ನನ್ನಲ್ಲಿ ದಫನ ವಾಗಿರುವ ಭಾವನೆಗಳು ಅನಾಥ ವಾಗಿರುವಾಗ
ಕಾರಣವರಿಯದೆಂಬ ಜಾಣ ಕುರುಡು ನಿನ್ನದು!
ಕನಸು ಕಂಗಳ ಭಾವನೆಗಳು ಸೇರಲು ತೀರವಿದ್ದರೂ ಸೇರಲಾಗದೆ ಕಾದು ಬರಡಾಗಿವೆ!
2.ಪ್ರಯತ್ನಿಸಿದ ಪ್ರಣಯದ ಪರಿತಾಪವಿಲ್ಲ
ತರತರವಾಗಿ ಬೇಡಿದರು ಒಪ್ಪುವವ ನೀನಲ್ಲ!
ಅಳಿಸಲಾಗದ ಹೆಜ್ಜೆಗುರುತನಿಟ್ಟು ಮಾಯವಾದೆ!
ಆದರೂ ನೀನೆಂದು ಹಿಂದಿರುಗದ ಬಾಗಿಲ ಹೊಸ್ತಿಲಲ್ಲಿ ಕಾಯುತ್ತಿರುವೆ ನಾನು❤️
3.ಹೇಳಬಯಸದೆ ಹೇಳದ , ಹೇಳಿಯೂ ತಿಳಿಯದ ಮುಗ್ಧ ವೇದನೆ ~ ಪ್ರೇಮ!
4.ಬರೆದಷ್ಟು ಮುಗಿಯದ ಕವನಕ್ಕೆ ಮಾತಿಗೊಂದು ಆಸ್ಪದವ ಮೌನವೊಂದು ನಿರಾಕರಿಸುತಿತ್ತು!
5.ಅದೆಷ್ಟು ಆಳವೋ ನಾ ಕಾಣೆ
ಇನ್ನೆಷ್ಟು ಗೋಜಲೋ ನಾನರಿಯೆ!
ಆದರೂ ಇನ್ನೆನನೋ ನೋಡುವ ತವಕ!
ಪ್ರಯತ್ನಕ್ಕೊಂದು ಫಲ ಸಿಕ್ಕೀತೇ?
6.ಉತ್ತರವಿಲ್ಲದ ಪ್ರಶ್ನೆಗೆ ಎಂದಿಗಾದರೂ ಅಂತ್ಯ ಸಿಕ್ಕೀತೇ ಎಂಬ ಪ್ರಶ್ನೆಯಲ್ಲಿ ಉತ್ತರಡಗಿರುವಾಗ ಜಾಣ ಕುರುಡೊಂದು ನೆಮ್ಮದಿಯಿಂದ ನಗುತಿತ್ತು!
7.ನಿನ್ನ ಅರ್ಥೈಸಿಕೊಳ್ಳಲಾಗದ ಅರ್ಥಕ್ಕೊಂದು ಅನರ್ಥವೆಂಬ ನಾಮಕರಣ ಮಾಡುವಾಸೆ!.
8. ಕಂಗಳ ನಡುವಿನ ಒಲವಿನ ಕಾಮಗಾರಿ ಅಪೂರ್ಣವಾಗಿದೆ!
ಪ್ರೀತಿ ಎಂದಾದರೂ ಆ ಎಲ್ಲೆ ಮೀರಿ ಪಯಣ ಮುಗಿಸ ಬಹುದೇ?
9. ಮನದಾಳದಲ್ಲಿ ಮನೆಮಾಡಿದ ಮೌನ ಖೈದಿಗೆ
ಮಾತೆಂಬ ಜಗದ ಸ್ಪರ್ಧಿಯಾಗುವಾಸೆ!
ಕಿಟಕಿಯ ಸರಳಿನ ಮೂಲಕ ಸೂರ್ಯ ರಶ್ಮಿಗೆ ಮೈಯೊಡ್ಡು ವ ಆತನಿಗೆ
ಮಾನವು ಕೈ ಯೆಳೆದು ಕಿವಿಯಲ್ಲಿ ಪಿಸುಗುಟ್ಟಿತು...
" ನಾನೇ ಸತ್ಯ, ನಾನೇ ಎಲ್ಲ... ನನ್ನಲ್ಲಿ ಇರದುದು ಮೌನದ ಜಗದಲ್ಲಿಲ್ಲ"
ಆತ ಒಮ್ಮೆ ದಿಗ್ಭ್ರಮೆಗೆ ಒಳಗಾಗಿದ್ದಂತು ಸುಳ್ಳಲ್ಲ!
10. ಸಾವಿನ ಮನೆಯ ಅತಿಥಿಗೆ ಪ್ರೀತಿಯಂಬ ದಾರಿಹೋಕ/ಕಿ ಅಮೃತವಾಗುವ ಭರವಸೆ ನೀಡುವಾಗ,
ಅದೇ ಪ್ರೀತಿಯ ಗತವು ವಿಷದ ರೂಪದಲ್ಲಿ ಗಹಗಹಿಸಿ ನಕ್ಕದ್ದು ಸುಳ್ಳಲ್ಲ!
11. ಪ್ರೀತಿಯೆಂಬುದು ಸಾವಾದರೆ ಆ ಸಾವಿನ ಮಡಲಲ್ಲಿ ಮಲಗುವ ಅವಕಾಶವೊಂದು ನನ್ನದಾದೀತೆ?
ಆ ಸುಖ ಎಂದಗಾದರೂ ಸಾವಿನ ಭೀಕರತೆಯ ಮೀರಿಸಬಹುದೇ?
12. ಎಂದಾದರೂ ನಾವೆಲ್ಲ ಬೇರೆಯವರ ಕನಸುಗಳಲ್ಲಿ ಜೀವ ಪಡೆಯುವೆವೆ?
ಎಂದಾದರೂ ಅವರ ಭಾವನೆಗಳ ಕುಂಚದಿಂದ ನಮ್ಮ ಚಿತ್ರಗಳು ಜೀವ ಪಡೆಯುವ ವೇ ?
Comments
Post a Comment