some- ಭಾಷಣೆ!

 ಆತನ ಮೌನವೇ ಎಲ್ಲವ ಕೆರಳಿಸುವುದು! ಅಂತಹದ್ದೇನಿರಬಹುದು ಆತನ ಶಬ್ದಗಳಲ್ಲಿ?ಇದಕ್ಕೆ ಉತ್ತರ ಬಲ್ಲವಳು ನಾನಲ್ಲ.ಉತ್ತರ - ವಿವರಣೆ - ವಿಶ್ಲೇಷಣೆ ಎಲ್ಲವೂ ಆತನೇ...ಆತನೊಬ್ಬ ಮಳೆಗಾಲದ ಸೂರ್ಯ.ಮಾತು ಕಮ್ಮಿ,ಮೌನದ ಸಂವಾದವೇ ಹೆಚ್ಚು!ಪುಟ್ಟ ಪುಟ್ಟ ಮುತ್ತುಗಳಂತೆ ಪೋಣಿಸಿರುವ ತುಂಡರಿಸಿದ ಸಂದೇಶಗಳು!ಕೆಲವೊಮ್ಮೆ ಎಲ್ಲ ಪ್ರಶ್ನೆಗಳಿಗೂ ಎರಡೇ ಬಗೆಯ ಉತ್ತರಗಳು ಲಭ್ಯ! ಒಂದೋ ಸ್ತಬ್ಧ ನಗು,ಇಲ್ಲವಾದಲ್ಲಿ ಕಡುರಾತ್ರಿಯ ಭೀಕರ ಮೌನ!ಆದರೆ ಕಾಣೆಯಾದ ತಾಳ್ಮೆಯ ತರಬೇತಿ ಯಂತು ಚೆನ್ನಾಗೇ ನಡೆಯುತ್ತಿದೆ! ದಿನವಿಡೀ ಮನದಲ್ಲಿ ಚಿತ್ರೀಕರಿಸಿದ ಕಂತುಗಳನ್ನು ಸಿಗುವ ಬೊಗಸೆಯಷ್ಟು ಐದು ನಿಮಿಷದ ಅವಧಿಯಲ್ಲಿ ಭಟ್ಟಿ ಇಳಿಸುವ ಕಾರ್ಯವಿನ್ನು ನಿಂತ ಕಾಮಗಾರಿಯಾಗಿದೆ! 

ಮೌನಕ್ಕೇ ನಾದರೂ ರೂಪ ವಿದ್ದರೆ ಅದು ಬಹುಶಃ ಆತನ ಸಂದೇಶಗಳಲ್ಲಿ ಕಾಣುತಿತ್ತು! ಆದರೂ ಆಡುವ ನಾಲಕ್ಕು ಮಾತುಗಳು ತೂಕಭರಿತ- ಅರ್ಥಗರ್ಭಿತ!(ಹೆತ್ತಮ್ಮಗೆ ಹೆಗ್ಗಣ ಮುದ್ದು ಎಂಬ ಗಾದೆಯ ಪ್ರಭಾವ ವೇನೋ😅)
ಒಮ್ಮೊಮ್ಮೆ ಈ ಮೌನದ ಕೋಟೆಯ ಗೋಡೆಗಳ ಒಡೆದು ಹಾಕುವ ಹೆಬ್ಬಯಕೆ! ಆದರೇನೋ ಅಳುಕು!
ಆತನು ಬಹುಶಃ ಚಂದ್ರನಂತೆ ಪಕ್ಷ - ಪಾಲಕ! ವಾರಾಂತ್ಯ ದಲ್ಲಿ ಆತನಲ್ಲಿ ಅಡಗಿರುವ ಮೂಕ ನಿಗೊಂದು ರಜೆ! ವಾರಾಂತ್ಯ ಕ್ಕೆಂದು ದಿನಗಳು ಬೇಗ ಕಳೆಯಲಿ ಎಂಬ ಕೋರಿಕೆ ಬಂದದ್ದಂತು ಸುಳ್ಳಲ್ಲ!
ಪ್ರತಿ ಸಲವೂ ಅದೇ  ನಾಲಕ್ಕು ಸಂದೇಶ ಗಳನ್ನು ಪುನಃ - ಪುನಃ ಓದಿ ಕಾಣದ ಸತ್ಯವ ಹುಡುಕುವ ಪ್ರಯತ್ನ ನಿರಂತರ!

ಆತನು ಚೂರೇ - ಚೂರು ಮಾತಿಗೆ ಲಭ್ಯನಾದಾಗ ಅಭ್ಯಾಸ ಮಾಡಿದ ಸಾಲುಗಳನ್ನು ಆತ ಹಾಗೂ ಆತನ ಮೌನ ಮರೆಸುವುದು ಸರ್ವೇ ಸಾಮಾನ್ಯವಾಗಿದೆ!ಮಾತಿನಲ್ಲೇ ಮನೆಕಟ್ಟುವ ಮರುಳೆಗೆ ಮನಸ್ಸಿನಲ್ಲೇ ಮಾತು ಮುಗಿಸುವವ ಸಿಕ್ಕಿದ್ದು ತರವೇ?
ಆತನುಲಿದ ಕವನ - ವ್ಯಂಗ್ಯ ಎಲ್ಲವೂ ಸಹ್ಯವೇ!ಇಲ್ಲವಾದಲ್ಲಿ ಅದೂ ಇಲ್ಲವೆಂಬ ಅಭದ್ರತೆ !

ಪರದೆಯ ಹಿಂದಿನ ಆತನ ಮನದ ನಡೆಗಳನ್ನ some - ಭಾಷಣೆಗಳಿಂದ ಊಹಿಸುವುದು ಸಲ್ಪ ಕಠಿಣ! ಆದರೂ ದಿನಕ್ಕೆ ಒಂದು ಬಾರಿ ಹಗಲಿರುಳಂತೆ ಒಂದು ಸಂದೇಶ ಮಿಂಚಿ ಮರೆಯಾಗುತ್ತೆ!ಆ ಸಂದೇಶ ದ ಮುಂದುವರೆದ ಭಾಗ ಅವನ ಬಳಿಯೇ ಉಳಿಯುವುದು ಖಚಿತ! ಮಾತಿನ ಮಧ್ಯ ಆಗಾಗ ನುಸುಳುವ ವೇದಾಂತ - ನಗು ಇನ್ನಷ್ಟು ಮಾತುಗಳಿಗೆ ಪೀಠಿಕೆ ಹಾಕುವದ೦ತು ಖಚಿತ!ಕಥೆಯನ್ನು ಅಪೂರ್ಣ ಮಾಡುವವನಿಗೆ ಮರುದಿನ ಹೊಸಕಥೆಯ ಹುಡುಕಾಟ! ಅರ್ಧ ಕಥೆಯನ್ನು ಬಹುಶಃ ನಾನೇ ಆರ್ಥೈಸಿಕೊಳ್ಳಬೇಕೆಂಬುದು ಆತನ ಉದ್ದೇಶವೇನೋ!

ಆದರೂ ಪ್ರತಿ ಬಾರಿ ಅಪೂರ್ಣ ಕಥೆಯ ಲೇಖಕಿ ನಾನು!

Comments

Popular posts from this blog

ಇಷ್ಟಪಡೋದಾ?? ಇಷ್ಟವಾಗೋದಾ?

ಮಬ್ಬು

ಆಂತರ್ಯ