ಅಪೇಕ್ಷೆ ಎಂಬ ಕಾರ್ಕೋಟಕ!
ಇರುಳಲ್ಲಿ ಇಲ್ಲಿ ಅಲ್ಲಿ ಹರಿದು ಚೆಲ್ಲಿ ಹೋಗಿದ್ದ ಮನದ ಭಾಗಗಳನ್ನು ಕಾಣುವ ಸಲುವಾಗಿ ಉಯ್ಯಾಲೆಯಲ್ಲಿ ಜೀಕುತ್ತಿದ್ದ ಅವಳಿಗೆ ಭಾವನೆ
ಗಳ ಕಾಲ್ಪನಿಕ ಮೈಗವಸು ಆಕೆಯನ್ನು ಆವರಿಸಿ ಕಾಡಿಸಿ ಮೈಸವರಿ ಹೋಗಿ ಬಿಟ್ಟಿತಂತೆ!
ತತ್ ತಕ್ಷಣ ಬೆಚ್ಚಿದರೂ ಇದೇನು ಹೊಸತಲ್ಲ ಎಂದು ಸಾವರಿಸಿಕೊಂಡಳು ..... ಆಗ ದೃಷ್ಟಿ ಬಿದ್ದಿದ್ದೇ ಮತ್ಸರದ ಮಂದಹಾಸ ಬೀರುತ್ತಿದ್ದ ಚಂದ್ರಮನ ಮೇಲೆ ! ಆತನಿಗೂ, ತನ್ನ ಮನದ ಚಂದಿರನಾದ ಆತನಿಗೂ ವ್ಯತ್ಯಾಸವೇನಿಲ್ಲ ಎಂದು!
ಬಾನರ ಮನೆಯಲ್ಲಿ ಶಾಶ್ವತ ಸ್ಥಾನಿ ಆತ! ಬಲವಂತವಾಗಿ ಭುವಿಗೆ ಬಾರೆಂದರೂ ಒಲ್ಲದ ಮನಸಿನಿಂದ ಬರುವ ಆತ! ಆಗಸದಿಂದ ಕಿತ್ತು ತಂದರೂ ಆತ ಹೋಗಬಯಸುವುದು ಮತ್ತದೇ ವಿಶಾಲಾಗಾಸಕ್ಕೆ ! ಆದರೂ ಆತನ ಬೆಳದಿಂಗಳೇ ಮತ್ತೇರಿಸಿಬೇಕಾದರೆ ಆತನನ್ನು ಹಿಡಿದಿಟ್ಟುಕೊಳ್ಳುವ ಶಕ್ತಿ ನನ್ನ ಒಡಲಿಗಿನ್ನು ಬಂದಿಲ್ಲ!
ಹಾಗೆಯೇ ನನ್ನ ಮನದ ಚಂದಿರ ಕೂಡ! ಆದರೆ ಆತನ ಆಗಸವೆಂಬುದು ಇನ್ನೂ ನಿಗೂಢ! ಒಮ್ಮೊಮ್ಮೆ ಮನದಾಳದಲ್ಲಿ ಸುನಾಮಿಯುಂಟು ಮಾಡೋ ಪ್ರಶ್ನೆ "ನನ್ನ ಮನದ ಚಂದಿರನ ಬಲವಂತದಿಂದ ಬರ ಮಾಡಿದರೆ ತಂಪಾದ ಬೆಳದಿಂಗಳೂ ಕೂಡ ಕೃಷ ಮನವ ಆಪೋಷಣಕ್ಕೆ ತೆಗೆದುಕೊಳ್ಳಬಹುದೇ ಎಂದು"!
ಇದಕ್ಕೆಲ್ಲ ಮೂಲ ಬೇರು ಆತನ ಮೇಲಿನ ಅಪೇಕ್ಷೆ!ಅಪೇಕ್ಷೆ ಎಂಬ ಮೂಲ ಬೇರು ಇಂದು ಕಾರ್ಕೋಟಕವೆಂಬ ಕಾಯಿ ಬಿಡುವ ಹೆಮ್ಮರ! ಕಾರ್ಕೋಟಕದಡಿಯಲ್ಲಿ ಹುದುಗಿದ್ದರೂ ತುಸು ಹೆಚ್ಚೇ ಫಲ ನೀಡುವ ಮಾಯಗಾತಿ ಈ ಅಪೇಕ್ಷೆ!
ಅಪೇಕ್ಷಿಸುವುದೇ ತಪ್ಪಾದರೆ ಕಣ್ಣಿಲ್ಲದ ಊರಲ್ಲಿ ಜನಿಸುವುದೇ ಲೇಸು! ಅಪೇಕ್ಷೆಯೊಂದು ಹಠವಾಗಿ ನಮ್ಮನ್ನು ನಾವೇ ಶಿಕ್ಷಿಸಿಕೊಳ್ಳುವ ಬದುಕ ಪಾಠಶಾಲೆ !
ಇದೆಲ್ಲವು ಉಯ್ಯಾಲೆಯಾಡುವಳ ಮನದಲ್ಲಿ ಸದಾ ಪ್ರಗತಿಯಲ್ಲಿದ್ದ ಕಾಮಗಾರಿಯಾಗಿದ್ದರೂ ಆಕೆ ಇದರರವಿರದಂತೆ ಆಗಸದ ನಿರ್ಲಿಪ್ತ ಚ೦ದಿರನಲ್ಲಿ ತನ್ನ ಮನದ ಚಂದಿರನ ಹುಡುಕುವ ಯತ್ನದಲ್ಲಿದ್ದಳು!
ಅಪೇಕ್ಷೆಯೆಂಬ ಕಾರ್ಕೋಟಕ ಆಕೆಯನ್ನು ಸಂಪೂರ್ಣವಾಗಿ ಅವರಿಗಿತ್ತು! ಆಕೆ ಕೂಡ ಕಾರ್ಕೋಟಕದ ಮತ್ತೇರಿ ಬೇರೇನೂ ತೋಚದ ಶಿಲೆ ಯಾಗಿದ್ದಳು!
Comments
Post a Comment