ಅನುರಾಗ🥀
1. ನಾನೇ ಗೀಚಿದ ನೆನಪ ಪುಟಗಳ ಓದಲು ಎದೆಯಾಳದಲ್ಲಿಂದು ಯಾಕಿಷ್ಟು ಸಂಕಟ?
ನೋವಿನಲೆಯ ನಲಿವಿಂದು ಕೊರಳ ಬಿಗಿಯುತ್ತಿರೆ,ಅಂತ್ಯ ಕಂಡೂ ಕಾಣದ ಅಸಂಖ್ಯ ಬಳಲಿ ಕೆಗಳು ಬಾ ಎಂದರೆ ಕಳೆದ ಕಥೆಗಳ ಕಂತುಗಳ ತಂತಿಯಲ್ಲಿ ಅರಳಿ ಮರಳುವ ನೋವುಗಳ ಲೆಕ್ಕ ವಿಡಲಾದೀತೆ??
2.ನಿನ್ನ ಕೋರಿಕೆಯೇನನ್ನೋ ಕೇಳದೆಯೇ ನನ್ನತನದ ಸಮರ್ಪಣೆ ನಿನಗಾಗಿದೆ!
ನಿನ್ನ ಅನುಮತಿ ಎಂಬ ಮೋಹರಿಲ್ಲದೇ ಮನಸಿನ ಪುಟಗಳ ರವಾನಿಸಲಾಗಿದೆ!
ಪ್ರೀತಿಸುವುದೆಂಬ ನಿರಂತರ ಸೆಳೆತಕ್ಕೆ ತೋರಿಕೆಯ ಆಣೆಕಟ್ಟ ಕಟ್ಟಲಾದೀತೆ?
ಕಟ್ಟಿದರೂ ಮಹಾಪೂರದಲ್ಲಿ ಅದು ಎದುರೀಜಬಲ್ಲದೆ?
3. ನೀರಿನಾಳವರಿಯದೇ ಶೃಂಗಾರ ಶರಧಿಯಲ್ಲಿ ಬಿದ್ದಾಗಿದೆ!
ದಡ ಸೇರಲಾರೆ, ಪಯಣವಿಂದ ಮುಗಿಸಲಾರೆ!
ಹತಾಶೆಯಿಂದ ವಿಲವಿಲವೆಂದು ಒದ್ದಾಡುತ್ತಿದೆ ಈ ಮನ!
ಕೊನೆಗೂ ಆ ವೇದನೆಯ ಅಲೆಗಳ ಈಜಲಾರೆ, ಈಜಿ ಈಸಲಾರೆ!
4. ಕಂಬನಿಗಳಿಂದು ನೆನಪಿನ ಪುಟಗಳಲ್ಲಿ ಸಾಕ್ಷಿಯಾಗಲು ಕಾದ ಹೊರಟರೆ, ಕಾರ್ಮುಗಿಲು ಕನಿಕರದ ಕುಡಿನೋಟವ ಬೀರಬಾರದೇ?
ನೆನಪುಗಳ ನುಂಗಿ ದಾಹವಿನ್ನು ಆರಿಲ್ಲ,ತುಸು ನೀನಿರುವ ಊರ ಹಾದಿಯ ತೋರಿ ದಾಹವ ನೀಗಿಸಬಾರದೇ?
ಬತ್ತದ ಬಯಕೆಗಳ ಬುತ್ತಿಯಲ್ಲಿ ಭೋರ್ಗರೆವ ಪ್ರೀತಿಯೆಂಬ ಜ್ವರವ ತುಸು ಗುಣಪಡಿಸಲಾಗದೇ?
Comments
Post a Comment