ಅತ್ತರ್- ಒಂದು ಮೋಹ!
1. ಹೂವರಸಿ ಹಸಿದು ಹೋದವಳ ಜೀವನವೊಂದು ಆಪೋಷಣದ ಕಟಕಟೆಯಲ್ಲಿ ನಿಂತಿದೆ, ಅಸ್ತಿತ್ವದ ಸಂಶಯವ ಹೊತ್ತಿ!
ಮುಳ್ಳಾಯಿತು ನಿನ್ನ ಮೇಲಿನ ವ್ಯಾಮೋಹ!
ಮೋಹವೆಂಬ ಅತ್ತರ್ ವಿರಹಿಯ ಮನಸ್ಸ ಕಿತ್ತು ತಿನ್ನುತ್ತಿತ್ತು!
ನಿನ್ನ ಬಿಸಿಯುಸಿರ ಬಯಸುವಿಕೆ ಎಂಬ ಅಸಹಾಯಕತೆ ಒಕ್ಕೂಲೊರಳ ಕೂಗಾದರೂ, ಇದ್ದೂ ಇರದಂತೆ ನೆರವ ನೀಡದ ಪ್ರತ್ಯಕ್ಷದರ್ಶಿಗಳು ಅಂದರೆ ನಿನ್ನ ಮನದ ಕೋಣೆಗಳು!
2. ಬೆಂಕಿಯ ಚಕ್ರವ್ಯೂಹವೇ ಎನ್ನಬಹುದಾದ ನಿನ್ನ ಪ್ರೀತಿ!
ಹೊರಬರಲಸಾಧ್ಯವಾದ ತುಸು ನಿರೀಕ್ಷಿತವೇ ಆದ ಪರಿಸ್ಥಿತಿ!
ಬಯಸದೆಯೂ ಹೊರತರಲು ಸನ್ನಿವೇಶದ ಸರಪಳಿಗಳು ಸೆಣೆದಾಡುವಾಗ, ನಾನು ಸ್ತಬ್ಧಳಾದೆ! ಆದರೆ ಸ್ವಾರ್ಥಿ ಸಮಯ ಸಾಗುತ್ತಲೇ ಇತ್ತು!
3. ಅನುರಾಗದ ಅರಗಿಣಿಯಿಂದು ಮೌನ ರೋಧನೆಯ ಅನುಭವಿಸುತ್ತಿದೆ!
ಹೊಂಬಣ್ಣ ಕಳೆದ ಆಗಸದಲ್ಲಿ ಭ್ರಮೆಯ ಛಾಯೆ ಆವರಿಸಿತ್ತು!
ಆದರೂ ಅರಗಿಣಿಗೆ ಕಳೆದು ಹೋದ ಕ್ಷಣಗಳ ಆರಿಸುವಾಸೆ!
ಹೇಗೆ ಹೇಳಲಿ ಅರಗಿಣಿ ನಿನರಸುತಿರುವುದು ಪ್ರೀತಿ ಮಾಸಿದ ಕಥೆಯ ಮಜಲುಗಳೆಂದು!
ಒಮ್ಮೆಯಾದರೂ ಮಸಣವೆಂಬ ಮನಸ ಕಾರಂಜಿ ಬತ್ತಬಾರದೇ?
ಅರಗಿಣಿ ಎಂದಾದರೂ ಸುಳ್ಳು ಸುಖದ ಮುಖವಾಡವ ದೂರ ತಳ್ಳಬಹುದೇ?
4. ಬರೆಯುತ್ತಿರುವ ಮೊದಲ ಸಾಲಿಗೂ ಕೊನೆಯ ಸಾಲಿಗೂ ಸಂಬಂಧವೇಕೋ ಮುರಿದು ಬಿದ್ದಿದ್ದೆ!
ಮುನಿಸು ಮನೆ ಮಾಡಿ ಕಥೆಗಾತಿಯ ದಿಕ್ಕ ತಪ್ಪಿಸಿದೆ!
ಪದಗಳಲ್ಲಿ ಕಾಣಬಯಸುವ ಅಕ್ಷರಗಳಿಗೇಕೋ ಅಕಾಲಿಕ ಮೌನ!
ಬರೆದರಷ್ಟೇ ನೆಮ್ಮದಿ ಎಂದು ಬಂದವಳಿಗೆ ಸಿಕ್ಕಿದ್ದು ಖಾಲಿ ಹಾಳೆಗಳ ಅತಿಥ್ಯ!
ಆದರೂ ಸಾವೇ ಇರದ ಸಾಲುಗಳ ಸಮರ್ಪಣೆ ನಿನಗೆ!
ಚೂರಾದ ಅಕ್ಷರಗಳ ಹೇಗೆ ಕೂಡಿದರೂ ಅದರ ರೂಪ ನಿನದೇ!
ನನ್ನ ಕವಿತೆ, ಮೌನ ಎಲ್ಲವೂ ನೀನೆ, ನಿನಗೆಯೇ!
Comments
Post a Comment