ಬಹುಶಃ ಪ್ರೀತಿ ಇನ್ನೂ ಇದೆ/ಇಲ್ಲ!

1. ಪ್ರೀತಿಯ ನೀರ ಮೀಯದೆ ಬೆಲೆಕಳೆದುಕೊಂಡ ಜೀವವೊಂದರ ಗಿಡವ ಇನ್ನೂ ಕುಂಡದಲ್ಲೇ ಇಟ್ಟು ಸೋತಿರುವೆ!
ಹುಡುಕುತ್ತಿರುವೆ   ಇಂದಿಗೂ  ಆ ಬದುಕ ಅಲ್ಲೇ ಎಲ್ಲೋ ಕಳೆದುಕೊಂಡಲ್ಲಿ, ಬಹುಶಃ ನಿನ್ನದೇ ಪ್ರಾಂತಗಳಲ್ಲಿ !
ಹರಸು ನಿನ್ನ ಅನುರಾಗದಿಂದ ಆ ಗಿಡವ, ಹೂವು ಬಿಡದೇ ಬಳಲಿ ಕಾದಿದೆ!
ಆಧುನಿಕ ಪ್ರೇಮಕಾವ್ಯದ ಪುಟಗಳ ನಡುವೆ ಇನ್ನೂ ಅರಳದ ಆ ಹೂವಿನ ಪಕಳೆಗಳಿಗೆಂದು ತುಸು ಜಾಗವ ನೀಡು !
ಮುಂದೆದಾರೂ ಪಕಳೆ ತರುವ ನಿನ್ನ ನೆನಪು ಮಣ್ಣ ಸೇರುವ ಬದಲು ನನ್ನ ಮನವ ಸೇರಲಿ !
ಬಹುಶಃವೇ ಎಂಬ ನಿನ್ನಯ ಪ್ರೀತಿ ಹಾಗೂ ಅದು ತರುವ ನೋವು, ಹತಾಶೆ ನಿರಂತರ!


2. ನೆನಪಿಗೊಂದು ನೈವೇದ್ಯ ವಿಡಲು ತಡಕಾಡಿದಾಗ ಉಳಿದಿದ್ದು ಮಾಸಿದ ಮಾತುಗಳು ಮತ್ತು ಅಸ್ಪಷ್ಟ ವೇ ಎನ್ನಬಹುದಾದ ನಿನ್ನ ಚಹರೆ !
ಬೆರಳೇಕೋ ಕಂಪಿಸುತ್ತಿದೆ ಆ ನೆನಪುಗಳ ಬರೆದು ಎದೆಗಪ್ಪಲು!
ಅಂದು ಶಬ್ಧಗಳ ಹಿಡಿತಕ್ಕೆ ಸಿಕ್ಕದೇ ಬಿರಿದಿದ್ದ ಪ್ರೇಮವು ಇಂದು ಬರಿದಾಗಿದೆ!
ಅಂದು ಸದಾ ಪ್ರೀತಿಯಲ್ಲಿ ಮೆರೆದಿದ್ದ ಪ್ರೇಮಿಗೆ ಇಂದು ವಿರಹವ ಮರೆಸುವ ದಾರಿ ಕಾಣದಾಗಿದೆ!
ಹೃದಯದ ಆಲಾಪವು ಕೇಳಿಸಿಯೂ ಅರ್ಥವಾಗದ ಸ್ಥಬ್ದ ನಿಲುವು ಈ ಪ್ರೇಮಿಗಾಗಿದೆ!
ಗತದಲ್ಲಿ ನಕ್ಕು ನಲಿದಿದ್ದ ಪ್ರೀತಿ ಇಂದು ಸೋತು ಹತಾಶವಾಗಿ ಈ ವಿರಹಿಯ ನೋಡಿ ನಗುತ್ತಿದ್ದೆ!
 ಅಲ್ಲಿಗೆ ಪ್ರೀತಿಯೂ  ಸೋತಿತ್ತು,ನಾನೂ ಸೋತಿದ್ದೆ!

3. ಬಾರದಿರೆನ್ನಲು ಬರದಿರಲು ನೆನಪು ಎಂಬುದು ಎಂದೂ ಪ್ರೀತಿಸದ ನೀನಲ್ಲ!
ನನ್ನ ಇರುವಿಕೆಗೆ ಹೃದಯದ ಇರಿಯುವಿಕೆ ಇಂದು ಅನಿವಾರ್ಯ!
ನಾನೇ ಹೆಣೆದ ಕಥೆಯ ಆವೃತ್ತಿಗಳು ವಿಷವಾಗಿ ವಿಸ್ತರಿಸಿದೆ!
ಪ್ರೀತಿಯ ಕೃತಿಚೌರ್ಯವು ಕಿತ್ತು ತಿನ್ನುತ್ತಿದೆ!
ಸೆರಗು ತುಂಬ ಹೇಳಲಾಗದ ನೆನಪ ನೀಡಿದವ ಇಂದು ಒಂದಿಷ್ಟು ಪ್ರೀತಿ ನೀಡಬಾರದೆ?

4. ಮೃದದ ಕಂಪಲ್ಲಿ ಒಂದಾಗಿ ಮುಸ್ಸಂಜೆಯ ಬಣ್ಣಗಳಲ್ಲಿ ಬೆರೆತು, ಇದ್ದೂ ಇರದ ನಿಷ್ಕ್ರಿಯ ಸೋಗವ ಧರಿಸಿದ್ದ  ಪ್ರೀತಿಗಿತ್ತು ಇನ್ನೂ ಹಲವು ವೇಷಗಳ ಧರಿಸುವ ತುಮುಲ!
ಅಲ್ಲೂ ಪ್ರೀತಿ, ಇಲ್ಲೂ ಪ್ರೀತಿ!
ಅದೂ ಪ್ರೀತಿ, ಇದೂ ಪ್ರೀತಿ!
ಹಾದಿಯ ಹದಿನಾರು ಹರಿವುಗಳಲ್ಲೂ ಪ್ರೀತಿ ಎನ್ನ ಬಹುದಾದ ಗೀತವಿದು ಎಂದರಹಿದವಳಿಗೆ ಕಾಣ ಬಯಸಿದಾಗ ಕಣ್ಣು ಕಟ್ಟಿ ಕಾಣೆಯಾದರೂ ಪ್ರೀತಿ ಎಲ್ಲೆಲ್ಲೂ ಕಾಣುತ್ತಿತ್ತು!
ಹ್ಹಾ.. ಪ್ರೀತಿ ಒಂದು ಇತ್ತು ಖಚಿತ  ಆದರೆ ಅವಳ ಕಮರಿದ ಕನಸುಗಳಲ್ಲಿ!

Comments

Popular posts from this blog

ಇಷ್ಟಪಡೋದಾ?? ಇಷ್ಟವಾಗೋದಾ?

ಮಬ್ಬು

ಆಂತರ್ಯ