ಮೂಕಿ 🍂
ಸುತ್ತಲಾವರಿಸಿ ಕೂತಿದ್ದ ಮುಖಗಳು ಪ್ರವಹಿಸುತ್ತಿದ್ದ ಅದೆಷ್ಟೋ ಮಾತುಗಳು... ಹೊಂದಿಕೆಯಾಗುವಂತಹ ಹಾವಭಾವಗಳು.. ಆಕರ್ಷಣೆಯ ಕೇಂದ್ರ ಬಿಂದುವಾಗಲು ಕ್ಷಣ ಕ್ಷಣಕ್ಕೂ ಧ್ವನಿಯ ಏರಿಳಿತದ ಬಗ್ಗೆ ಗಮನ ಕೊಡುತ್ತಿದ್ದ ಜನರು..ಮಾತಿನ ಮುತ್ತ ಪೋಣಿಸಲು ಹಠ ಬಿದ್ದ ವರಂತೆ ಅಲಿಖಿತ ಜವಾಬ್ದಾರಿಯನ್ನು ನಿರ್ವಹಿಸುತ್ತಿದ್ದ ರು...ಮಾತಿಗೊಂದು ಪ್ರತಿಮಾತು...ಆ ಪ್ರತಿಮಾತಿಗೊಂದು ಊರ್ಜಿತವೆಂಬಂತೆ ಬರುವ ಸಣ್ಣ ಪ್ರತಿಕ್ರಿಯೆಗಳು...ಕೆಲವೊಮ್ಮೆ ಗಾಳಿ ಬಂದಲ್ಲಿ ತೂರಿಹೋಗುವ ತರಗೆಲೆಗಳಂತೆ ಎಲ್ಲದಕ್ಕೂ ತಲೆದೂಗುವವರು ಇವರೇ.. ಇನ್ನೂ ಕೆಲವೊಮ್ಮೆ ವ್ಯವ ಧಾನ ಕಳೆದುಕೊಂಡ ವಿಮರ್ಶೆಯಲ್ಲಿ ತೊಡಗುವವರೂ ಇವರೇ.. ಅದೆಷ್ಟೋ ಅಕ್ಷರಗಳ ಜೋಡಣೆಯ ಉಗಿಬಂಡಿಯೊಂದು ಸಲೀಸಾಗಿ ಎಲ್ಲರನ್ನೂ ತಲುಪುತ್ತಿತ್ತು.. ನಿರರ್ಗಳವೆಂದರೆ ಅಪಚಾರ ವಾಗಲಿಕ್ಕಿಲ್ಲ... ಬಹುಶಃ ಜಗತ್ತಿನಲ್ಲಿ ಅತ್ಯಂತ ಸುಲಭ ಕಾಮಗಾರಿ ಎಂದರೆ ಮಾತಿನಿಂದ ಬೇರೆಯವರ ಮನ ಮೀಟುವುದು ಎಂದು ಅವಳು ತಿಳಿದಿದ್ದಳು.
ಆದರೆ ಇಂದು ಅವರೆಲ್ಲರ ಮಾತುಗಳಲ್ಲಿ ಅವಳು ಕೇಳ ಬಯಸಿದ್ದು ಗತದಲ್ಲಿ ಅವಳಾದುತ್ತಿದ್ದ ಮಾತುಗಳ! ಕಣ್ಣರಿಸುತ್ತಿದ್ದದ್ದು ಅವಳ ಮಾತಿನ ಶೈಲಿಯ!ಅವಳ ಮಾತು ಅವರಲ್ಲಿ ಸಿಗದೇ ಇದ್ದರೂ ತಾನಿಂದು ಮೂಕಿಯಾಗಿರುವೆ ಎಂಬುದು ಕ್ಷಣ ಮಾತ್ರದಲ್ಲಿ ಅರ್ಥವಾಗಿತ್ತು..ಮಾತು ಬಂದರೂ ಮೂಕರಾಗುವುದು ವಿರಳಾತೀತ..ಮಾತುಗಳ ಸುರಿಮಳೆ ಅಲ್ಲಿ ನಡೆಯುತ್ತಿದ್ದರೂ ಒದ್ದೆಯಾಗದೆ ಜೀವವಿಲ್ಲದ ಒಣ ಕಟ್ಟಿಗೆಯಂತೆ ಅವಳು ಇದ್ದಳು!ಆ ಸುರಿಮಳೆಯ ಸಪ್ಪಳದಲ್ಲಿ ಎಲ್ಲವೂ ಗೋಜಲು.. ಮಾತೆಂಬುದು ಎಂದೋ ಅಗಲಿದ ದಿನವಾಗಿತ್ತು.. ಅಂಭುದಿಯಲ್ಲಿ ಮುಳುಗಿದ ಹಡಗಾಗಿತ್ತು..ಮಾತು ತನ್ನ ಆವಾಸಸ್ಥಾನವನ್ನೇ ಬಿಟ್ಟು ಎಲ್ಲವ ಮೌನದ ಸುಪರ್ದಿಗೆ ವಹಿಸಿ ಎಲ್ಲಿಗೋ ಪ್ರಸ್ಥಾನ ಹೋಗಿತ್ತು!!
ಅಲ್ಲಿದ್ದ ಮಾತಿನ ದಿಶೆ ಮೂಕಿಯಾದ ಈಕೆಯೆಡಗೆ ಬಂದಾಗ ತೋರಿಕೆಯ ಮುಗುಳ್ನಗೆ ಯೊಂದು ಅದರ ದಾರಿ ತಡೆಯುತ್ತಿತ್ತು!!
ಮಾತೆಂಬ ಮಂತ್ರದಲ್ಲಿ ಎಲ್ಲವ ಮರೆಸುತಿದ್ದ ಆಕೆಯೀಗ ಯಾಕೆ ಹೀಗೆ?ಉತ್ತರ ಗೊತ್ತಿಲ್ಲ...ಅದೊಂದು ತೋರಿಕೆಯ ಮೌನವೇ? ಊಹೂಂ..ಉತ್ತರ ಗೊತ್ತಿಲ್ಲ...ಆಕೆಯ ಮಾತಿನಲ್ಲಿ ಮಿಂದೆದ್ದಿದ್ದ ನಿನ್ನೆಗಳು ಒಂದು ಭ್ರಮೆಯೇ?ಇದಕ್ಕೂ ಉತ್ತರ ಗೊತ್ತಿಲ್ಲ...ಆಕೆ ಮೂಕಿಯಾದಳೇ?ಆಕೆ ಮೂಕಿ ಯಾಗೇ ಇರುವಳೆ? ಇವಕ್ಕೂ ಉತ್ತರ ಗೊತ್ತಿಲ್ಲ..ಮೂಕಿಯ ನಿನ್ನೆಗಳು ಮತ್ತು ಮೌನವೆರಡು ಸಂಬಂಧವ ಕಡಿದುಕೊಂಡು ಮುನಿಸಿನಿಂದ ಮುಖ ಅಡ್ಡತಿರುಗಿಸಿ ನಿಂತಂತಿದ್ದವು! ತನಗೆ ಅಂದು ಆಸ್ಪದವನ್ನೇ ನೀಡಿಲ್ಲವೆಂದು ಮೌನ ಇಂದು ಹಠವ ತೀರಿಸಿಕೊಳ್ಳಲು ಆಕೆಯ ಮೇಲೆ ಸವಾರಿ ನಡೆಸಿತ್ತಾ ಎಂಬುದು ಒಂದು ಪ್ರಶ್ನೆ...
ಆಕೆಯ ನಿನ್ನೆಗಳು ಇಂದು ಕೇಳುಗರಿಲ್ಲದ ಗೋಷ್ಠಿಯಲ್ಲಿ ಬೇರೆಯದೇ ಕಥೆಯ ಹೇಳುತ್ತಿದ್ದವು!ಆಕೆಯ ನಿನ್ನೆಗಳಲ್ಲಿ ಸ್ಪಷ್ಟ, ಸ್ಪುಟವಾದ ಮಾತುಗಳ ಕೇಳಲು ಕೇಳುಗರು ಹಾತೊರೆಯುತ್ತಿದ್ದರು.. ಎಲ್ಲಾದಕ್ಕೂ ಉದ್ಗಾರ... ಎಲ್ಲದರಲ್ಲಿಯೂ ತರ್ಕ.. ಜೊತೆಯಲ್ಲಿ ಮಿತವಾಗಿ ವ್ಯಂಗ್ಯದ ಒಗ್ಗರಣೆ..ಮುಂದೆಂದೂ ಮಾತು ಸಿಗದು ಎಂದು ಭಾಸ ವಾದ ರೀತಿಯಲ್ಲಿ ಆಕೆ ಎಲ್ಲವನ್ನು ಒಂದೇ ಉಸಿರಲ್ಲಿ ಹೇಳಿ ಮುಗಿಸುವ ಅಭ್ಯಾಸ ಮಾಡಿಕೊಂಡಿದ್ದಳು... ಅರ್ಥವಾಗದೇ ಎಷ್ಟೋ ಮಂದಿ ನಿರ್ಲಕ್ಷ್ಯ ಮಾಡಿದ್ದೂ ಉಂಟು.. ಇನ್ನೂ ಕೆಲವರು ಪುನಃ ಹೇಳಲು ಕೇಳಿದ್ದೂ ಇದೆ..ಅವೆಲ್ಲ ಆಕೆಗೊಂದು ಕೃತ - ವಿಕೃತ ಸುಖಗಳಾ ಗಿದ್ದವು..ಆದರೆ ಇಂದು ಕೇಳುಗರಿಲ್ಲದ ಗೋಷ್ಠಿಯ ಕಥೆಯ ದೂರದಿಂದಲೇ ಆಲಿಸುವ ಕೇಳುಗಾತಿಯ ಪಾತ್ರವ ಅಂದಿನ ಮಾತುಗಾತಿ ನಿರ್ವಹಿಸುತ್ತಿದಾಳೆ..
ಇನ್ನೊಂದು ಕಿವಿಯಲ್ಲಿ ವರ್ತಮಾನದ ಮೇಜಿನಲ್ಲಿ ನಡೆಯುವ ಮಾತುಗಾರರ ನೋಡಿ ಗತದ ನನ್ನ ಮೀರಿಸಲು ಸಾಧ್ಯವೇ ಎಂದು ಒಳಗೊಳಗೇ ಹಿರಿಹಿರಿ ಹಿಗ್ಗುತ್ತಿದ್ದಳು...ಆದರೆ ತನ್ನದಲ್ಲದ ವಸ್ತುಗಳ ಒಡೆತನ ಎಂದಿಗಾದರೂ ಸಮಂಜಸವೇ?
ಪರಿಸ್ಥಿತಿಗಳ ಬದಲಿಸುವಲ್ಲಿ ಪರಿ ಪರಿಯಾಗಿ ಪ್ರಯತ್ನಿಸಿದ ಅವಳಿಗೆ ತಾನು ಮೂಕಿಯಾಗಿದ್ದ ಜೀರ್ಣ ಮಾಡಿಕೊಳ್ಳಲು ಇಂದಿನ ವರ್ತಮಾನದ ಮುಹೂರ್ತ ಸಾಕ್ಷಿಯಾಗಿತ್ತು.. ಹಾಗಾದರೆ ಅಂದಿನಿಂದ ಆಕೆಯ ಮೌನವೇ ಆಕೆಯ ಮಾತಾಗಿತ್ತು..ಮೌನವು ಆಕೆಗರಿವಿರದಂತೆ ಆಕೆಯ ಹೃದಯದಾಳದಲ್ಲಿ ಗೆರೆಬಿಚ್ಚಿ ಕುಣಿದು ಆಕೆಯನ್ನು ಜಾಣ್ಮೆ ಯಿಂದ ಒಲಿಸಿಕೊಂಡಿತ್ತು ..ಆಕೆ ಮಾತು ಮರೆತ ಮೂಕಿಯಾಗಿದ್ದಳು ..
ಮಾತು ಯಾರಿತ್ತ ಕೊಡುಗೆಯಾಗಿತ್ತು?ಮೌನ ಯಾರಿತ್ತ ಶಾಪವಾಗಿತ್ತು?ಉತ್ತರವ ಮಾತು ಬಿಟ್ಟ "ಮಾತೇ"ಹೇಳಬೇಕು! ಇಲ್ಲವಾದಲ್ಲಿ ಮೂಕಿ ಎಂಬ ಬಿರುದನ್ನು ನೀಡಿದ ನೀಡಿದ ಮೌನವೇ ಹೇಳಬೇಕು!ನಾವು ನೀವಲ್ಲ...ಆಕೆಯೂ ಅಲ್ಲ!
~ನವ್ಯಾ ಪ ಹೆಗಡೆ
12.30 am
ಬೆಂಗಳೂರು🫀
Comments
Post a Comment