ನ(ಬೆ)oಗಳೂರು🌃
ಚೂಪಾದ ನಖಗಳಿಂದ ಹೃದಯವ ಘಾಸಿಗೊಳಿಸಿ ತಾನೇ ತಾತ್ಕಾಲಿಕ ತೇಪೆ ಹಚ್ಚುತ್ತಿರುವ ಹುಚ್ಚು ಮಹಾನಗರ... ಅಳಿಸಿಹೋದ ಹಳೆ ಪುಟಗಳ ಪಾತ್ರಗಳ ನೆನಪಿಸಿ ಕಿಚ್ಚೆಬ್ಬಿಸುವ ಕುಹುಕ ಕೂಪ... ತನ್ನವರೆಂದು ಭಾಸವಾಗುವಷ್ಟರಲ್ಲಿ ಸತ್ಯದ ಕೆಂಬಣ್ಣವ ಮುಖಕ್ಕೆ ರಾಚುವ ಶಹರದ ಬಲೆ ಹೆಣೆದಿರುವ ರಸ್ತೆಗಳು.. ಅಸಂಖ್ಯ ಮನಗಳಲ್ಲಿ ಕಣ್ಣ ಬಿಡದೇ ಕಾಲವಾಗುವ ಅಗಣಿತ ಆಸೆ - ಮಾತುಗಳು... ಇದ್ಯಾವದರ ಹಂಗೇ ಇಲ್ಲದೆ ಗುರಿಯ ಮರೆತಂತೆ ಸಾಗುವ ನಿರ್ಜೀವ ಮನಗಳ ಹೊತ್ತ ವಾಹನಗಳು! ಇದೂ ಸಾಲದಂತೆ ನಿಗೂಢ ರಾತ್ರಿಯನ್ನು ಕುತೂಹಲವೆಂಬ ಬೆಳಕಿನಿಂದ ನಾಶ ಮಾಡುವ ಪ್ರಯತ್ನ ಅವಿರತ!
ಬೇರೆ ನಗರಗಳಂತೆ ಈ ಮೇಲ್ಕಂಡ ವಿಷಯಗಳಲ್ಲಿ ಸ್ಪರ್ಧೆ ಒಡ್ಡುವ ತವಕ ನಮ್ಮ ಬೆಂಗಳೂರಿಗೆ!ಹೌದು..ಈ ವಿಷಯಗಳು ಇಂದಿಗೂ ಸೋಲಿಲ್ಲದ ರಾಜನಂತೆ ಮೆರೆಯುತ್ತಿರುವುದು ಇಲ್ಲಿಯೇ..ಆದರೂ ಯುದ್ದವಿಲ್ಲದೇ ಸೋಲನ್ನ ಆಲಂಗಿಸುತ್ತಿರುವ ಸತ್ಯ ಆರ್ಥೈಸಿಕೊಳ್ಳಲಾಗದ ಒಗಟು!
ತೆರೆಮರೆಯ ಶಾಹಿಯಲ್ಲಿ ಬರೆದ ಈ ಶಹರದ ಪ್ರಸಂಗಗಳು ಅನೇಕ!ಹೇಳಬೇಕೆಂದರೆ ಹೊಟ್ಟೆ ಪಾಡಿಗಾಗಿ ಹೊಟ್ಟೆಯಲ್ಲಿಟ್ಟು ಸಾಕಿದವಳ ಬಿಟ್ಟು ನೆಲೆ ಕಂಡುಕೊಳ್ಳಲು ಬರುವ ಯುವಜನತೆ!ಆ ಜನತೆಯಲ್ಲಿ ಟಿಸಿಲೊಡೆಯುವ ಆಧುನಿಕ ಯೋಚನೆ - ಯೋಜನೆಗಳು! ಇವುಗಳ ಕಾಣ ಹೊರಟ ಮನಗಳಿಗೆ ಸಿಗುವ ಆ ಅಂಗೈಯಷ್ಟು ಜಾಗದ ತಾರಸಿಯಲ್ಲೂ ಆಗಸವ ದಿಟ್ಟಿಸಲು ಪೈಪೋಟಿಯ ಈ ಶಹರ ಅನುಗ್ರಹಿಸಿದೆ!
ಹೀಗೆ ನೂರೊಂದು ಕಥೆಗಳು!ಆ ನೂರೊಂದು ಕಥೆಗಳಲ್ಲಿ ಭಾಗವಾಗಿಯೂ ಭಾಗಿಯಾಗದ ಸಾವಿರಾರು ಮುಖಗಳು!ಆ ಮುಖಗಳಿಗೂ ಲಕ್ಷಾಂತರ ವ್ಯಾಖ್ಯಾನಗಳಿವೆ ಎಂದು ಭಾಸವಾಗುವುದು ಸಿಗುವ ಚೂರೇ ಚೂರು ವಿಶ್ರಾಂತಿಯಲ್ಲಿ ಕಣ್ಣ ಮುಂದೆ ಆ ಮುಖಗಳು ಗಹಗಹಿಸಿ ನಕ್ಕಾಗ.. ಇನ್ನೂ ಕೆಲವೊಮ್ಮೆ ಅತ್ತಾಗ..🙂
ಎಲ್ಲೋ ಸತ್ಯದಿಂದ ಸುಳ್ಳಿನೆಡೆಗೆ ಓಡುತ್ತಿರುವ ಈ ಊರು ತನ್ನ ಒಡಲಿನಲ್ಲಿ ತನ್ನ ಸಮಯದ ಗತಿಗೆ ಹೊಂದಿಕೊಂಡವರನ್ನು ಕರೆದುಕೊಂಡೇ ಓಡುತ್ತದೆ!ಎಲ್ಲರಿಗೂ ಸವಿಯಲು ಹಾಗೂ ಸವೆಯಲು ಕಥೆಗಳ ಕೈತುತ್ತನ್ನು ಅನ್ಯಾಯವಾಗದೆ ಹಂಚುತ್ತದೆ! ಕೆಲವರು ಹೊಸಕಥೆಗಳ ಮುನ್ನುಡಿಯ ತಲುಪಿದರೆ ಇನ್ನೂ ಕೆಲವರು ಹಳೆಕಥೆಯ ಹಿನ್ನುಡಿಯಲ್ಲಿ ಸಿಗದ ಏನನ್ನೋ ಹುಡುಕುತ್ತಾರೆ!ಆದರೆ ಈ ಊರು ಇಂತ ವುಗಳನ್ನು ಎಷ್ಟು ನೋಡಿಲ್ಲ!ಅದರ ಪಯಣ ಮಾತ್ರ ನಿರಂತರ. ನಿರ್ಲಿಪ್ತ.
ಹಾಗೇ ಈ ಊರು ಅಷ್ಟೊಂದು ಕ್ರೂರಿಯಲ್ಲ! ದಿನದಿನವೂ ದಿಕ್ಕು ತಪ್ಪಿತೆಂದರೆ ದಾರಿ ತೋರುವ ನನ್ನಂತ ಹಲವು ದಾರಿಹೋಕ ಗೆಳೆಯರು! ಇವರೇ ಮತ್ತೆಂದೂ ಸಿಗರೆಂಬ ಹಾಗೂ ಇನ್ನೂ ಇಂತಹದ್ದೇ ಪೋಷಾಕು ಧರಿಸಿ ಕಾಯುತ್ತಿರುವ ಅನೇಕ ಗೆಳೆಯರು ನಾಳೆಗಾಗಿ ಎಂಬ ಸತ್ಯವನ್ನು ಈ ಊರು ಜತನ ಮಾಡಿಕೊಂಡಂತಿದೆ! ಕಣ್ಮರೆಯಾಗಬೇಕೆಂಬ ಕಣ್ಣುಗಳು ಕುತೂಹಲದಿಂದ ಯಾವುದೋ ಕಾಡುವ ಕಣ್ಣುಗಳ ಹುಡುಕುವುದು ಇಲ್ಲಿನ ಅಲಿಖಿತ ದಿನಾಚರಿಯಾಗಿದೆ! ದಿನದಂತ್ಯಕ್ಕೆ ಸಿಗುವ ನೆಮ್ಮದಿ ಗಾಗಿ ಕೆಲಸವ ಕೊಲ್ಲುವ ಹಂಬಲ ಒಂದು ಕಡೆಯಾದರೆ, ನೆಮ್ಮದಿಯ ಕೆಡಿಸುವ ನಂಜ ಮರೆಯಲು ಕೆಲಸದ ಬರಕಾಯುವ ಹುಂಬತನ ಇನ್ನೊಂದೆಡೆ! ಯಾರಿಗೋ ಎಂಬಂತೆ ಅನೇಕಾನೇಕ ಛದ್ಮವೇಷಗಳಧರಿಸಿ ಸುಸ್ತಾದ ಗಗನಚುಂಬಿ ಕಟ್ಟಡ ಗಳು ಮಾತನಾಡದೆಯೂ ಹಲವು ವಿಷಯಗಳ ವ್ಯಕ್ತ ಪಡಿಸುತ್ತಿತ್ತು!ಆದರೆ ಮಹಾನಗರದಲ್ಲಿ ಮನಬಿಚ್ಚಿ ಮಾತನಾಡಬೇಕಾದ ಮನಸ್ಸು ಮಾತನಾಡಿಯೂ ಮೌನವಾಗಿತ್ತು!
ಹೀಗೆ ಕಥೆಯ ತುಣುಕುಗಳ ಒಂದೆಡೆ ಸೇರಿಸಲು ಕಷ್ಟ ಪಡುತ್ತಿರುವ ಕೈಗಳಿಗೇನು ಈ ನಗರದಲ್ಲಿ ಕಮ್ಮಿಯಿಲ್ಲ! ದಿನರಾತ್ರಿಯ ಗಾಜಿನ ಶೀಷೆಗಳಲ್ಲಿ ಕಾಣುವ ಬೆಳಕುಗಳ ನಡುವೆ ಗೆರೆಯೊಂದನೆಳೆದು ರಂಗೋಲಿ ಬಿಡಿಸಲು ವಿಫಲವಾಗುವುದು ಹೊಸತೇ ನಲ್ಲ!
ಅಸ್ಪಷ್ಟವಾದರೂ, ಅಂತ್ಯವಿಲ್ಲದ್ದಿದ್ದರೂ ಅನಂತ ಈ ನಗರ!ಈ ನಗರವ ನಾಲ್ಕಕ್ಷರಗಳಲ್ಲಿ ಗೀಚಿ ಹಲುಬಲಾದೀತೆ?ಅದು ಅವರವರ ವ್ಯಕ್ತಿಗತವಾದದ್ದಾಗಿದೆ!
ಅನೇಕ ಸತ್ಯಗಳ ಕಣ್ಣಾಮುಚ್ಚಾಲೆ ಆಟಕ್ಕೆ ಮೈದಾನ ಈ ನಗರ!ಈ ಆಟವ ಜಯಿಸಲು ಕಾದು ಸೆಣೆದಾಡುವವರು ಎಂದರೆ ಇಲ್ಲಿ ಜೀವ ಸವೆಸುವ ನಾವು - ನೀವುಗಳು!ಗೆಲುವನ್ನು ಕಾದಿರುವ ಈ ಸ್ಪರ್ಧಿ ಗಳಿಗೆ ಸೋಲೆಂದು ಆತಿಥ್ಯವ ನೀಡದಿರಲಿ! ಆಟ ಹೀಗೆ ಮುಂದುವರೆಯಲಿ!
~ನವ್ಯಾ ಹೆಗಡೆ
10.37 pm
ಬೆಂಗಳೂರು🫀
Comments
Post a Comment