ಸ್ತಬ್ಧ 💜
ಅಂದು ಅಲ್ಲಿ ನೀರವ ಮೌನದ ಏಕಾದಿ ಪತ್ಯಕ್ಕೆ ಕೊಂಚ ಅಡ್ಡಿ ಮಾಡುತ್ತಿದ್ದದ್ದು ಬೇರೆಡೆಗೆ ನೆಟ್ಟ ನೋಟಗಳು.. ಒಂದೆರಡು ಮಾತುಗಳು.. ಆದರೆ ಉದ್ದೇಶವೇನೋ ಕಣ್ಣೋಟಗಳಿಂದ ಕೈ ತಪ್ಪಿಸಿಕೊಳ್ಳುವುದೇ ಆಗಿತ್ತು..ಬಹುಶಃ ಇದ್ದರೇ ಪ್ರೀತಿಯೇ ಇರಬಹುದಾದ ಅಬಲ ನೂಲಿನಿಂದ ಹೃದಯಕ್ಕೆ ಬೇಲಿ ಹಾಕಿ ಕೊಂಡು ಇಬ್ಬರೂ "ಸ್ತಬ್ಧ"ರಾಗಿ ಕೂತಿದ್ದರು..
ಅಂದು ಸೇರಿದ್ದು ಜಗಕ್ಕೆ ನಿರೀಕ್ಷಿತ ವಾಗಿದ್ದರೂ ಅವರಿಗದು ಅನಿರೀಕ್ಷಿತವಾಗಿತ್ತು..ಅತಿಯಾದ ಪ್ರೀತಿಯ ಕೊಡಲಿಯ ಏಟಿಗೆ ಬಲಿಯಾದ ಹೃದಯ ಹೊತ್ತ ಜೀವ ಒಂದು ಕಡೆಯಾದರೆ ,ಪ್ರೀತಿಯ ಅವಶೇಷಗಳ ಇನ್ನೂ ಪೊರೆಯುತ್ತ ಹೃದಯದ ಜೋಪಡಿಯಲ್ಲಿ ಭಧ್ರವಾ ಗಿಸಿಟ್ಟುಕೊಂಡ ಜೀವ ಇನ್ನೊಂದೆಡೆ!
ಅವರ ಕನಸುಗಳಲ್ಲಿ ಕಾಮನಬಿಲ್ಲ ಬಿಡಿಸಿದ, ಏಕಾಂತದಲ್ಲಿ ನೆವವೊಡ್ಡಿ ಬರುವ,ಕವಿತೆಗಳಲ್ಲಿ ವರ್ಣನೆಗಳ ನೈವೇದ್ಯ ಪಡೆಯುವ, ಮಿಂಚಿನಂತೆ ಝಳಪಿಸುವ ನಗುವಿಗೆ ಕಾರಣರಾದ, ಹತಾಶೆಯ ಕಣ್ ಹನಿಗಳ ಅರ್ಪಣೆ ಪಡೆದ ಇನ್ನೊಬ್ಬರು ಊಹೆಗೂ ನಿಲುಕದ ಸನಿಹದಲ್ಲಿ ವರ್ತಮಾನದ ಬೇಗೆಯ ಅನುಭವಿಸುತ್ತಿದ್ದರೂ ಕಾಣದ ಸಂಕೋಲೆಗಳಲ್ಲಿ ಬಂಧಿಯಾಗಿದ್ದರು!
ಅಂಗೈಯಷ್ಟು ಜಾಗದಲ್ಲಿ ಅವರಿಬ್ಬರ ಮನಸ್ಸು,ಆಕಾಶವೇ ವೇದಿಕೆ ಎಂಬಂತೆ ನರ್ತಿಸಿತ್ತು.. ನ ಡುಗಿತ್ತು.. ನುಡಿದಿತ್ತು... ಅದೆಷ್ಟೋ ಹೇಳಿಯೂ ಹೇಳ ಲಾಗದ ಮಾತುಗಳು ಭಾವನಾ ಲಹರಿಯಲ್ಲಿಯೇ ವಿನಿಮಯವಾಗುವ ಕಾಲ ಚಿಗುರೊಡೆದಿತ್ತು.. ಹೃದಯದಾಳದಿಂದ ಬಂದ ಅದೆಷ್ಟೋ ಮಾತುಗಳು ದಾರಿ ಮಧ್ಯೆಯೇ ಬೇರೆ ಪೋಷಾಕು ಧರಿಸಿ ಎದುರಿನವರ ದೃಷ್ಟಿಯಲ್ಲಿ ಆತಿಥ್ಯವನ್ನೂ ಅನು ಭವಿಸಿದ್ದುಂಟು..
ಪೂರ್ವಾದ್ದೇಶವಿಲ್ಲದೇ, ಮನಸ್ಸಿನಲ್ಲಿ ಕರಿ ಪರದೆ ಎಳೆದಂತೆ, ಆದರೂ ಆಯಸ್ಕಾಂತದಂತೆ ಎಳೆದು ಬಂದ ಜೀವಗಳೆರಡು ಅಂದು ಒಂದು ಮೇಜಿನ ಎರಡು ಬದಿಗಳಲ್ಲಿ,ಅತಿ ಎಂದರೆ ಆತಿ ಸನಿಹದಲ್ಲಿ ಅದೆಷ್ಟೋ ಸವಾಲುಗಳಿಗೆ ಸಾಕ್ಷಿಯಾಗಲಿದ್ದರು! ಮೌನಕ್ಕೊಂದು ನಿರ್ಗಮನವ ಸೃಷ್ಟಿಸುತ್ತಿದ್ದರು.. ಹೇಳಿದರೂ ಸೋತಂತೆ.. ಹೇಳದೆಯೂ ಸೋತಂತೆ.. ಹೀಗೇ ಸೋಲಿನ ಮೇಲೋದಿಕೆಯ ಮುಚ್ಚಿ ಸತ್ಯವ ಜೋಪಾನ ಮಾಡುತ್ತಿದ್ದರು..ಆದರೂ ಸತ್ಯ ಬಲು ಚೂಟಿ.. ನಾನಾ ವಿಧದಲ್ಲಿ ಪ್ರಕಟಗೊಳ್ಳುತ್ತಲೇ ಇತ್ತು.. ಗೋಚರವೂ ಆಗುತ್ತಲೇ ಇತ್ತು.. ಆದರೆ ಎಲ್ಲವೂ ಸ್ತಬ್ಧವಾಗಿತ್ತು..ಸಮಯವೊಂದರ ಬಿಟ್ಟು..
ಹೋಗಬೇಡ ಎಂದು ಮನಸ್ಸಿನಲ್ಲೇ ಕೂಗಿ ಹೇಳುತ್ತಿದ್ದ ಅವನು,ಅದನ್ನೇ ಹೇಳು ಎಂದು ಆತನನ್ನು ದಿಟ್ಟಿಸಿ ನೋಡುತ್ತಿದ್ದ ಅವಳು..ಅವರು ಕೂತಲ್ಲಿಂದ ಅವರ ಮನಸ್ಸುಗಳು ಕೈಯ ಹಿಡಿದು ಬಲು ದೂರ ಸಾಗಿ,ಅನೇಕ ಕಥೆಗಳ ಸೃಷ್ಟಿಸಿ ಜೊತೆಯಾಗಿ ಸಾಗುತ್ತಿರಲು,ಮೈ ಕೊಡವಿಕೊಂಡ ಅವಳು "ಹ್ಹಾ..ನನಗೆ ಸಮಯವಾಗುತ್ತಿದೆ..ನಾನಿನ್ನು ಹೊರಟೆ ಎಂದು ಹೊರಡಲು "ಸರಿ" ಎಂದು ಸ್ತಬ್ಧನಾದ ಆತನು ಅಲ್ಲೇ ಗೋಡೆಗೆ ಒರಗಿ ಕಣ್ಣ ಮಿಟುಕಿಸದೇ ಅವಳನ್ನೇ ನೋಡುತ್ತಿರಲು ಆಕೆ ಮಾತ್ರ ಹಿಂದಿರುಗಿ ನೋಡಲಿಲ್ಲ...ಅದೇನೋ ಸಾಧಿಸಿದ ಹುಮ್ಮಸ್ಸು,ತೇಜಸ್ಸುಗಳ ಗಟ್ಟಿಯಾಗಿ ಹಿಡಿದಿಟ್ಟುಕೊಂಡು ಒಂದೇ ಸಮನೆ ಬಂದ ಅವಳು ಕಿಟ ಕಿಯಲ್ಲಿ ಆತನ ಕಂಗಳಿಗೆ ಅವನಿಗೋಸ್ಕರ ತಡ ಕಾಡಿದರೂ ಆತ ಕಾಣಲಿಲ್ಲ! ಆದರೂ ಮನಸ್ಸು ಹೇಳಿತಂತೆ " ಅದು ಇಲ್ಲೂ ಇದೆ, ಇಂದೂ ಇದೆ, ಎಂದೆದು ಇದೆ" ಎಂದು!
ಮತ್ತೆ ಮಿಲನ ಸಾಧ್ಯವೇ??????
- ನವ್ಯಾ ಹೆಗಡೆ
23.12.2022
ಬೆಂಗಳೂರು.
Comments
Post a Comment