ನೀನಾಗಬಾರದೇ ನಾ?

        ವಾಸ್ತವಕ್ಕೆ ಹತ್ತಿರವಾಗುವ ತುಸು ತೂಕವೆನಿಸುವ ಉತ್ತರವೆಂದರೆ ನೀನಾರಬುದೇ ನನಗೆ ಗೊತ್ತಿಲ್ಲ! ಆದರೂ ನೀನಾಗಬೇಕೆಂಬ ಹೆಬ್ಬಯಕೆ! ನನ್ನಲ್ಲಿಲ್ಲದ ನಿನ್ನಲ್ಲಿರುವ ಎಲ್ಲವ ಮೈಗೂಢಿಸಿಕೊಳ್ಳುವ ವಿಶ್ರಾಂತಿ ಯನ್ನಿರಿಯದ ಕಾಮಗಾರಿ! ಆದರೂ ಖಾತರಿಯಾಗದ ಗುರಿ!ಇದಕ್ಕೆ ದೂಷಿಸುವುದ ಯಾರನ್ನು? ನಿನ್ನನ್ನೋ ಅಥವಾ ಅತ್ತ ನೀನಾಗದೆ ಇತ್ತ  ನಾನು  ನಾನಾಗದೆ  ನಿತ್ತ ತ್ರಿಶಂಕುವ?
          ನಿನ್ನ ರೂಪುರೇಷೆಗಳನ್ನು ಅರಿತಿರುವೆ! ಕನಸಲ್ಲೂ ನಿನ್ನ ಕುರಿತಾದ ಚಿಕ್ಕ ವಿವರಗಳ ಹೇಳಬಲ್ಲೆ!ಇಲ್ಲಸಲ್ಲದ ಅಧ್ಯಯನಗಳ ಚಾಚೂ ತಪ್ಪದೇ ನಡೆಸುವೆ! ಪ್ರಶ್ನೆಗಳೇನಾದರು ಉಳಿದರೆ ಅವು "ಏಕೆ ಹೇಗಾದೆ ನಾನು?","ಕಾಣದ ನಿನಗಾಗಿ ನನ್ನನು ನಾನು ಕಾಳಸಂತೆಯಲ್ಲಿ ಮಾರಿ ಕೊಂಡದ್ದಾದರೂ ಯಾಕೆ?","ನೀನಾಗುವಲ್ಲಿ ನಾನು ಒಂಚೂರು ಎಡವಿದರೂ ಸ್ವಯಂ ದೂಷಿಸುವಿಕೆ ಯಾಕೆ?" ಹೀಗೆ ಹಲವಾರು...
         ಅಷ್ಟಕ್ಕೂ ಈ ಸ್ಥಾನ ಪಲ್ಲಟನೆಗೆ ಪ್ರೇರೆಪಣೆಯಾವುದೆಂದು ನಾನಿನ್ನೂ ಅರಿತಿಲ್ಲ! ನಿನ್ನ ಬಗ್ಗೆ ಕೇಳಿದ ಕ್ಷಣದಿಂದಲೂ ನಿನ್ನ ಸ್ಥಾನ ಕಸಿಯ ಬೇಕೆಂಬ ಹುಚ್ಚು ಕುದುರೆಯೊಂದು ಓಡಲು ಸರ್ವ ಸನ್ನದ್ಧ ವಾಗಿತ್ತು! ನಾನು ನೀನಾಗುವುದಷ್ಟೇ ಅಲ್ಲದೇ,ನೀನಾಗಿ ನಿನ್ನನೂ ಮೀರಿಸಬೇಕೆಂಬ ನಂತರದ ಯೋಜನೆಯನ್ನು ಕೂಡ ಹಾಕಿ ಕೊಂಡಾಗಿತ್ತು!ದಿನದಂತ್ಯಕ್ಕೆ ನನ್ನನೇ ನಾನು ನೀನೆಂಬ ಪರೀಕ್ಷೆಗೆ ಒಡ್ಡುವೆ!ಚೂರೇ ಚೂರು ತಪ್ಪಿದರೂ ತೇಜೋಭಂಗವಂತೂ ಖಂಡಿತ!
                ಈ ಬದಲಾವಣೆ ಬೇರೆ ಅವರಿಗೆ ಅಸಂಗತ.ನಾನು ನಾನಗದೆ ಇರುವ ನನ್ನನ್ನು ಬೇರೆ ಯಾರಾದರೂ ಹೇಗೆ ಒಪ್ಪಿಕೊಂಡಾರು?ನಿನ್ನ ಮೇಲಿನ ಅಸೂಯೆಗೆ ತೆತ್ತು ತ್ತಿರುವ ಬೆಲೆಯೇ ಇದು - ನಿನ್ನನ್ನು ಮೀರಿಸುವ ಗೋಜಿಗೆ ಬಿದ್ದದ್ದು.
                ನೀನು ನೆಡೆದ ಪ್ರಾಂತಗಳಲ್ಲಿ ನಾನು ನಡೆದಾಗ ಅರ್ಥವಾದದ್ದು ಇಷ್ಟೇ!ನನ್ನದೇ ಭಾವನೆಗಳ ಸಮಾಧಿಯ  ಮೇಲೆ ಪಯಣ ಹೇಗಿರಬುದೆಂಬುದು!
                 ನನ್ನ ಕೈಗೆಟುಕದ ಕಲ್ಪನೆಯ ನಕಾಶೆ ನೀನು! ಆರಾಧಿಸಲೋ ಇಲ್ಲ ಮೌನಿಯಾಗಿ ರೋಧಿಸಲೋ ಒಂದೂ ಅರಿಯೆ!ನಿನ್ನ ಮೇಲಿರುವ ಭಾವದ ಭರಾಟೆಯನ್ನು ಒಂದು ಚೌಕಟ್ಟಿಗೆ ನಿಲುಕಿಸಲಾರೆ!ಅರ್ಥವಾಗದ ಪ್ರಶ್ನೆಗೆ ಅಸಂಗತವು ಉತ್ತರವಾಗಲಾರದು!
                   ಕೆಲವೊಮ್ಮೆ ಅನಿಸುವುದುಂಟು ನೀನು ನೀನಾಗಯೇ ಇರು!ನಾನು ನಾನಾಗಿಯೇ ಇರ ಬೇಕೆಂಬುದು! ಆದರೆ ನನ್ನ ಸುಖ ದುಃಖದ  ಮೂಲವ ನನ್ನ ಮನಸ್ಸು ಕೈ ಮಾಡಿ ತೋರುವುದು ನಿನ್ನೆಡೆಗೆ! ಕ್ಲಿಷ್ಟ ವೆಂದೆನಿಸಿದರೂ ಬಗೆಹರಿಯದ ಭಾವನೆಯ ಅತಿರೇಕ ವಿದು! ಮೂಲವ ಹುಡುಕುವುದು ನಿಂತ ದಿನ ನಾನು ನೀನಾಗವಿಕೆ ಎಂಬ ಹುಚ್ಚು ನಾಟಕಕ್ಕೆ ಪರದೆ ಬೀಳ ಬಹುದೇನೋ!

Comments

Popular posts from this blog

ಇಷ್ಟಪಡೋದಾ?? ಇಷ್ಟವಾಗೋದಾ?

ಮಬ್ಬು

ಆಂತರ್ಯ