ಅಸ್ತಿತ್ವ - ವಾಸ್ತವ - ತಲಾಶ್ ಹಾಗೂ ಅಂತಿಮ
ಕೆಲವೊಮ್ಮೆ ಭಾಸವಾಗುವುದು ಜೀವನ ರೈಲಿನ ಬೋಗಿಗಳಂತೆ ಎಂದು! ಹಿಂದಿನ ಬೋಗಿಗೆ ಗುರಿ ಸೇರಲು ಮುಂದಿನ ಬೋಗಿ ಅತ್ಯವಶ್ಯಕ! ಆದರೆ ಮುಂದಿನ ಬೋಗಿಗೆ ಹಿಂದಿನ ಬೋಗಿಯ ಅಸ್ತಿತ್ವದ ಪರಿವೇ ಇಲ್ಲದಿರುವಿಕೆ!
ನಾವೆಲ್ಲರೂ ಬೋಗಿಗಳೇ ಬಹುಪಾಲು! ಭಾವನೆಗಳ ಹಳ್ಳವ ಪಾರಾಗಲು ನೆನಪೆಂಬ ತಾತ್ಕಾಲಿಕ ನಾವೆಯ ಹಿಡಿದು ಸಾಗಲು ಬರಕಾಯುತ್ತಿರುವವರು! ಪಯಣ ಸಾಗಲು ಕೊಂದುಕೊಂಬುವಿಕೆಯ ಭಾಗವಾಗಿ ರುವವರು!
ಮುಂದಿನ ಬೋಗಿಯ "ತಲಾಶ್ "ನಲ್ಲಿ ನಮ್ಮನ್ನು ನಾವು ಕಂಡುಕೊಳ್ಳುತ್ತೇವೆ! ಹಾಗೆಯೇ ಕಳೆದುಕೊಳ್ಳೋದು ಇದ್ದೇ ಇದೆ..ಅದೊಂದು ಮುಕ್ತಿ ಯೇ ಇಲ್ಲದ ಮುಗ್ಧ ಮೂಕ ನರಕ!ಆದರೆ ಹಾಜರಿಯೇ ನೀಡದ ಅಸ್ತಿತ್ವ!
ಬಹುಶಃ ಇದುವೇ ವಾಸ್ತವ! ಸಾಗುವ ದಾರಿಯಲ್ಲಿ ಹಿಂಡಿಂದನ ಮರೆಯುವುದೇ ಅಂತಿಮ!ಈ ಪದಗಳ ಕಾಲಗಣನೆ ಹೀಗೇ ಎಂದು ಹೇಳುವುದು ಕಷ್ಟ ಸಾಧ್ಯ! ಏಕೆಂದರೆ ಇವುಗಳ ಅಸ್ತಿತ್ವ ವಾಸ್ತವವೇ ಹೊರತು ಅವುಗಳ ಆವರ್ತಕ ವಾಸ್ತವವಲ್ಲ!
ಒಂದಿಲ್ಲದೇ ಇನ್ನೊಂದಿಲ್ಲ! ಏಕೆಂದರೆ ಬೋಗಿಗಳ ಅನುಕ್ರಮದಂತೆ ಈ ಘಟನಾವಳಿಗಳು ಕೂಡ ಸರಹದ್ದಿಗೆ ಒಳಪಟ್ಟಿವೆ. ಸರಹದ್ದ ಎಳೆದವರಾರು? ಎಲ್ಲರ ಬರುವಿಕೆಗೆ ಕಾಯುವ ಕೊನೆಯ ನಿಲ್ದಾಣವೆಂಬ ' ಅಂತಿಮ ' ! ಯಾವುದನ್ನೂ ಕಾಯದೇ, ಯಾರಿಂದಲೂ ಅಪೇಕ್ಷಿಸದೆ, ಎಂದೂ ನೀಡದ ವಾಗ್ಧಾನವ ನಿಭಾಯಿಸುತ್ತಿರುವ ಶಿಸ್ತು ತಪ್ಪದ ಸಿಪಾಯಿಯದು!
ಯಾತಕ್ಕಾಗಿ ತಲಾಶ್?ಅಂತಿಮವೆಂಬುದು ಸುಡುವ ಸುಂದರಕಾಂಡವೇ? ಇವೆರಡೂ ವಾಸ್ತವವೆ? ವಾಸ್ತವಕ್ಕೊಂದು ಅಸ್ತಿತ್ವ ಇದೆಯೆ? ಹೀಗೆ ಪೂರ್ಣವಿರಾಮದ ಜಾಗವನ್ನು ಪ್ರಶ್ನಾರ್ಥಕ ಬಿಗುಮಾನದಿಂದ ಆವರಿಸಿಕೊಂಡಿದೆ. ಪ್ರಶ್ನೆಗೊಂದು ಉತ್ತರ,ಉತ್ತರಕ್ಕೊಂದು ತರ್ಕ, ತರ್ಕಕೊಂದು ವಾಸ್ತವ, ವಾಸ್ತವಕ್ಕೊಂದು ಅಂತಿಮ ಸಿಗಲಿ!
Comments
Post a Comment