ಮರೆತಗಾನ

ಪ್ರೇಮಪರ್ವದ ಮರೆತಗಾನವಿಂದು ಕಾಡುತ್ತಿರಲು,
ಬೆನ್ನಹೊತ್ತಿ ಹೊರಟೆ ನೆಮ್ಮದಿಯ ಕಾಲಸಮಾಧಿಮಾಡಿ!
ಅಪರೂಪದ ನೀಲಿಹೂವಿನ ಗಾಢಬಣ್ಣ ಮನಸ್ಸಿನ ಆಗಸವ ಮೆತ್ತಿರೆ,
ಸಂಭವಿಸದ ಪ್ರೀತಿಯ ಬಟ್ಟೆ ತೊಟ್ಟಿರುವೆ ಮೈ ಮುಚ್ಚಲು!


ಮೃದುಲ ಮೊಹಬ್ಬತ್ತಿನ ಚಾಪೆ ಹಾಸಿ ತುಂಬಿದೆ ನೀನು ನನ್ನೀ ಎದೆಯ!
ಇಂದು ಅದೇ ಎದೆ ಭಾರವೆನಿಸಿ ಕಟ್ಟಿದೆ ಎನ್ನಯ ಉಸಿರ!
ಪ್ರಣಯದ ಸಂಚಿಕೆಯು ಸೂತ್ರಹರಿದ ಪತಂಗವಾಗಿರಲು,
ಒಡಲಾಳದ ಭಾವಲೋಕದ ಚಿತ್ರಣವಾಗಿದೆ ಅಪೂರ್ಣ!


ನಿನ್ನ ನೆನಪೆಂಬುದು ಮುಳ್ಳಿನ ಹಾಸಿಗೆಯಾಗಿ ತನುವ ಚುಚ್ಚಿತಿನ್ನುತ್ತಿದೆ!
ಒಲ್ಲೆ ಎನಾಲಾಗದೇ ಗಾಯದಿಂದ ಸೋರುತ್ತಿರೆ ನಿನ್ನ ತುಂಬುಬಳಕೆಯ ಕೀವು,
ಪ್ರವಹಿಸುತ್ತಿದೆ ಎದೆಯಾಳಕೆ ನಿನ್ನ ಮೈಯ ಸೋಕಿದ ಸೊಗಡು!
ಈಗಲೂ ವಿಷಣ್ಣ ನಾಗದಿರೆ  ಪ್ರೇಮ ಮದಿರೆಯ ಅತಿಶಯೋಕ್ತಿ ನಿಜವಾದೀತೆ?


ನಿಶೆಯ ನಿಷ್ಕಲ್ಮಶ ಕನಸುಗಳ ದೋಚಿದ ಮಾಂತ್ರಿಕನಿಗೆ
ಮಂತ್ರಮುಗ್ಧ ಭಾವನೆಗಳ ಗೂಡು ಕೇಳಬಯಸಿದೆ ನೂರೊಂದು ಪ್ರಶ್ನೆಗಳ!
ನಿನ್ನ ಆಕರ್ಷಣೆಯ ವಾಹಿನಿಯಲ್ಲಿ ತೋಯ್ದುಬಿಟ್ಟ ಮೋಹದ ತರಂಗವು ದಿಕ್ಕುತಪ್ಪಿ,
ನಿನ್ನೆದೆಯ ಬಾಗಿಲಲ್ಲಿ ನಿಷಿದ್ಧ ವಿಚಾರಣೆಗಾಗಿ ತಡಕಾಡುತ್ತಿದೆ!
ಇಂದೆಲ್ಲವ ಕೇಳಿಬಿಡಲೇ??

ನನ್ನನ್ನು ನಾನೇ ದೋಚುಕೊಂಬಂತ ಸದರವನ್ನೇತಕೆ ಇಟ್ಟೆ?
ದರ್ಪಣದಲ್ಲಿ ಅಗೋಚರವಾಗಿದ್ದ ಭವಭಾವಗಳ ಏತಕೆ ಬಡಿದೆಬ್ಬಿಸಿದೆ?
ತುಂತುರುವಿನಲ್ಲಿ ತೋಯ್ದ ಮುದ್ದೆಯಾಗುವ ಮನಸ್ಸಿನ ತಂತಿಗಳ ಏಕೆ ಮೀಟಿರುವೆ?
ಪ್ರೀತಿಸುವ ಪರಿಯ ಏಕೆ ಮರೀಚಿಕೆಯಾಗಿಸಿಹೆ?
ಪ್ರೇಮಪರ್ವದ ಮರೆತಗಾನದಿಂದ ನನ್ನನೇಕೆ ಕಾಡುತ್ತಿರುವೆ?

ಕಾಡದಿರು ಗೆಳೆಯ ಕಾಡದಿರು!!!
 

~11.07.2022
ಸೋಮವಾರ
ಬೆಂಗಳೂರು 💔






Comments

Popular posts from this blog

ಇಷ್ಟಪಡೋದಾ?? ಇಷ್ಟವಾಗೋದಾ?

ಮಬ್ಬು

ಆಂತರ್ಯ