ಕೊಂದುಕೊಂಬುವಿಕೆ🤎
ಚೂರಿಯ ಮೊನಚಾದ ತುದಿಯ ಕೊರಳಿಗೆ ಹಿಡಿದು ನಿನ್ನ ಮೇಲೆ ಪ್ರಕಟವಾಗುವ ಪ್ರೇಮವ ಪರಿಶೀಲಿಸಿಕೊಳ್ಳುವೆ!ಕಂಪು ಮಾಸಿದ ಪಕಳೆಗಳ ಪುಟಗಳ ನಡುವೆ ಕಾಪಾಡಿ ನನ್ನವೆಂಬುವುದ ಖಾತ ರಿಗೊಳಿಸಿಕೊಳ್ಳುವೆ!ಕಂಬನಿಯ ಕಡಿದಾದ ಕಣಿವೆಯ ಕೊನೆಯ ಕಲ್ಲು ಮೊನೆಯ ಮೇಲೆ ನಿತ್ತು ಮುಗಿಲ ದಿಟ್ಟಿಸಿಕೊಳ್ಳುವೆ!ಇರುಳಲ್ಲಿ ಸನಿಹದಲ್ಲೇ ಇರುವ ನಿನ್ನ ನಾನು ಕಣ್ಣರೆಪ್ಪೆಗಳ ಮಿಟುಕಿಸದೆ ನೋಡಿ ನಿದಿರೆಯ ಸರಪಳಿಯ ಕಿತ್ತೊಗೆಯುವೆ!
ನನ್ನಸ್ತಿತ್ವವ ಇರಿದು ನಿನ್ನ ಗೆಳತಿಯಾಗಿ ಗೆದ್ದು ಬೀಗುವ ನಿಷಿದ್ಧ ಆಚರಣೆಗಳ ಅನಾಮತ್ತಾಗಿ ನನ್ನೆದೆಯ ಅಂಗಳಕ್ಕೆ ಬರಮಾಡುವೆ!ಸುಡುವ ವಿಸ್ಕಿಯ ಹುಚ್ಚೇರುವ ಅಮಲಿನ ಶಾಖದಲ್ಲಿಯೂ ನಿನ್ನದೆಯ ಶೀತವನ್ನು ಅರಸಿ ಹೊರಡುವೆ! ಪಂಚಭೂತಗಳಿಗೆ ಪ್ರೇಮದ ಸವಾಲೊಡ್ಡುವೆ! ಹುಚ್ಚು ಪ್ರೇಮಿಯಾಗಿ ಗತವನ್ನೇ ಪ್ರಶ್ನಮಾಲಿಕೆಯನ್ನಾಗಿಸಿ ಅವಧಾನಿಯಾಗುವೆ!ಕಾವ್ಯಾತ್ಮಕ ಪ್ರೇಮದ ಕರೆಯೋಲೆಗಾಗಿ ಕಟುಸತ್ಯಗಳ ಕಮರಿಸಲೂ ನಾನಿಂದು ಸಿದ್ಧ! ಕಠಿಣಾತೀತ ಮನದ ಗೋಡೆಯ ಒಡೆದು ಹಾಕಿ ನಿನ್ನದಲ್ಲದ ಎಲ್ಲವ ಆಚೆ ನೂಕುವೆ! ಕೊಂದುಕೊಂಬುವಿಕೆಯ ಅತಿ ಶ್ರದ್ಧೆಯಿಂದ ಆಚರಿಸುವೆ!ಎಲ್ಲ ನಿನಗಾಗಿ! ಅರ್ಥಾತ್ ನನಗಾಗಿ! ಕೊಲೆಗೆಡುಕಿ ಪ್ರೇಮಿಯನ್ನಾಗಿಸಿಬಿಟ್ಟೆ ನೀನು! ವಿರಹಗಳೇ ವಿರಹಿಗೆ ಸೋಪಾನ!ಇಷ್ಕಿನ ಅಂಕೆಯಲ್ಲಿ ಖಳನಾಯಕರೆಲ್ಲ ಕ್ಷುದ್ರರಲ್ಲ!ಹಾಗಂತ ಪ್ರೇಮವೂ ಕ್ಷುದ್ರವಲ್ಲ!ವಿನಾಶವಿಲ್ಲದ ಪ್ರೀತಿ ವಿಲಕ್ಷಣ!ಸುಖದ ಸಾಂಗತ್ಯವೆಂದರೆ ಅದು ನಿನ್ನ ಪ್ರೇಮಿಯಾಗಿಯೆ ಸಾಯುವ ಸಾವು!ನನ್ನ ಮಟ್ಟಿಗೆ ಅದು ಸಹಜ ಸುಂದರ!
ಪ್ರೇಮಭಾಷೆಯ ನಿವೇದನೆಗಾಗಿ ಅಕ್ಷರಗಳ ಕೊಲ್ಲುವೆ!ನಿನಗಾಗಿ ಬಡಿಯದ ಹೃದಯದ ಮಿಡಿತಗಳ ಬಲವಂತವಾಗಿ ನಿಲ್ಲಿಸುವೆ! ಒಲವ ಪಕ್ಷಿ ಹಾರಲಾಗದ ದಿಗ್ಬಂಧನಗಳ ಧಿಕ್ಕರಿಸುವೆ! ಅನಾಮಿಕಳಾಗಿ ನೆತ್ತಿಗೇರಿದ ನವಿರಾದ ಮೋಹದ ಸೋಗಿನಲ್ಲಿ ಕೊಲ್ಲುತ್ತಿರುವೆ , ಕಾಯುತ್ತಿರುವೆ!
ನನ್ನಂತಹ ಹಲವಾರು ಪ್ರೇಮಿಗಳ ಕೊಂದುಕೊಂಬುವಿಕೆಯ ಕಿತ್ತುತಿನ್ನುವ ಕಥಾಗುಚ್ಚಗಳ ಎದೆಗವಚಿ ಜೋಪಾನಿಸುವೆ!ಈ ಅಪರಾಧವ ನೀನು ಅನುಮೋದಿಸಬಲ್ಲೆಯಾ? ಜಗತ್ತು ಒಪ್ಪದೇ ಇರುವ ವೇದವ ಪ್ರತಿಪಾದಿಸುವುದು ಅತಿರೇಕಿ ಪ್ರೇಮದ ಕರ್ತವ್ಯ!ಈ ಕರ್ತವ್ಯವ ತುಸು ಜಾಸ್ತಿಯೇ ನಿರ್ವಹಿಸುತ್ತಿರುವೆ ಅಪಾದಮಸ್ತಕಳಾಗಿ!ನೋವಿಲ್ಲದ ನಲಿವು ಅಜ್ಞಾತ ಪ್ರೀತಿಯಂತೆ! ಅಜ್ಞಾತವಾಸಿ ನಾನಾಗಲಾರೆ!
ನಿನ್ನಯ ಬಿಸಿಯುಸಿರಿನಲ್ಲಿ ನಾನೂ ಪಾಲುದಾರಳಾಗುವೆ!ಈ ವಿಧ್ವಂಸಕ ಪ್ರೇಮಕ್ಕಾಗಿ ಹುಂಬಳಾಗಿರುವೆ!
ನಾಶ ನಿರಂತರ!ಪ್ರೇಮ ನಿರುತ್ತರ ಅಷ್ಟೇ!
~ಇಂತಿ ನಿನ್ನ ಪ್ರೇಮಿ🪶🤎

Comments
Post a Comment