ಕಾತುರ
ಅಂತ್ಯ ಎಂಬುದರ ಲಕ್ಷಣ ಕಾಣದ ಜಡಿಮಳೆಯಲ್ಲಿ ತೋಯ್ದ ಎರಡು ಮಾನುಷ ಆಕೃತಿಗಳು.ಪ್ರಕೃತಿಯ ಸೃಷ್ಟಿಕ್ರಿಯೆಯ ರೂವಾರಿಗಳಾದ ಗಂಡು ಹಾಗೂ ಹೆಣ್ಣು ಜಾತಿಯ ಎರಡು ಸದಸ್ಯರು! ಒಬ್ಬರು ಎರಡು ಹೆಜ್ಜೆ ಮುಂದೆಯಾದರೆ,ಇನ್ನೊಬ್ಬರು ಅಸಹಮತಿಯ ಸೂಚಕವೆಂಬಂತೆ ಇನ್ನೆರಡು ಹೆಜ್ಜೆ ಹಿಂದೆ ಹೋಗಿ ನಿಂತಿದ್ದರು.ಮಾತಿನ ಘರ್ಷಣೆಗಿಂತಲೂ ತುಸು ತೀಕ್ಷ್ಣವಾದ ಮೌನ ತುಂಬಿದ ದೃಷ್ಟಿಯುದ್ಧ ಅಲ್ಲಿ ಉಪಸ್ಥಿತರ ಕಂಗಳಿಗೆ ರಾಚುವಂತಿತ್ತು. ಅರಾಜಕತೆ,ಮನಸ್ತಾಪದ ಛಾಯೆ ಆವರಿಸಿತ್ತು. ಆದರೆ ಅವರೀರ್ವರ ಮನದಾಳವ ಇಣುಕಿ ನೋಡಿದವರಾರು? ಶುಭ್ರ ಬಿಳಿಯ ಸೀರೆಗೆ ದೃಷ್ಟಿ ಎಂಬಂತೆ ಕಡುಗಪ್ಪು ಅಂಚನ್ನು ಹೊಂದಿದ್ದ ಮುದುಡಿದ ಒದ್ದೆ ಸೀರೆ, ಕಣ್ಣಿಗೆ ಒಂದುಕಾಲದಲ್ಲಿ ಗಡಿಯನ್ನು ಬಿಡಿಸಿದ್ದ ಹರಡಿದ ಕಾರಡಿಗೆ, ಹಣೆ ತುಂಬಿದ ವರ್ಷಧಾರೆಯಲ್ಲಿ ಮಿಂದೆದ್ದ ಒದ್ದೆ ಮುಂಗುರುಳು! ಇವೆಲ್ಲವ ಕೂಡಿ ಆಕೆ ಬಿರುಸು ಹೆಜ್ಜೆಗಳನ್ನು ಇಟ್ಟು,ಎಲ್ಲವ ಧಿಕ್ಕರಿಸುವ ನಡುಗೆಯೊಂದಿಗೆ ಹೊರಟು ಹೋದಳು!
ಆ ನತದೃಷ್ಟ ಊರಿನ ಮಳೆಗಾದರೋ ಆಯುಷ್ಯವಿಲ್ಲ! ಮುನಿಸುಕೊಂಡ ಆಕೆ ಈ ಜಗದಲ್ಲಿ, ಮುನಿಸುಕೊಂಡ ಮಳೆ ಇನ್ನೊಂದು ಜಗದಲ್ಲಿ ! ಇಬ್ಬರೂ ಮನಸ್ಸು ಮುರಿದು ಕೊಂಡಿದ್ದು ಜಗತ್ತಿನ ಮೇಲೆ ! ಬಹುಶಃ ಯಾವುದೋ ನಿಗೂಢ ಕಾರಣಕ್ಕಾಗಿ ! ಇದೊಂದು ಬಗೆಹರಿಯದ ವಿವಾದ! ಏತನ್ಮಧ್ಯೆ ಶ್ವೇತೆ ಬಂದು ನಿಂತದ್ದು ಜನನಿಬಿಡ ಬೀದಿ ಬದಿಯ ಹೂವಿನಾಕೆಯ ಬಳಿ ! ಪ್ರತಿದಿನ ನಡೆಯುವ ಪದ್ಧತಿ ಇದು. ಆ ಹೂವಿನಾಕೆಯ ದೃಷ್ಟಿ ತುಸು ಮಬ್ಬು . ಆದರೆ ಇವಳೆಂದರೆ ಅದೇನೋ ಉತ್ಕಟ ಪ್ರೇಮ, ಭಾವ ! ಅವಳ ಆಗಮನಕ್ಕೆಂದೇ ಕಾದಿರಿಸಿದ್ದಂತಿದ್ದ ದುಂಡು ಮಲ್ಲಿಗೆ! ಆದರೂ ಪಾರಿಜಾತದೆಡೆಗೆ ತುಸು ಒಲವು ಜಾಸ್ತಿ! ಎಲೆಯಲ್ಲಿ ಬೆಚ್ಚಗೆ ಮಲಗಿದ ಮಲ್ಲಿಗೆ ಈಕೆಯ ಕೈಸೇರಿತು! ಎಲ್ಲರಿಗೂ ಇದೊಂದು ಸಂಚಿಕೆಯ ಅಂತ್ಯ ಎಂದಾದರೂ, ಕಾಣದ ಚಹರೆಗಳಿಗೋಸ್ಕರ ಸಮರ್ಪಿಸಿದ ಇನ್ನೊಂದು ಮಾರ್ಮಿಕ ಸಂಚಿಕೆಯ ಪೀಠಿಕೆ ಇದಾಗಿತ್ತು!
ಅಂದ ಹಾಗೆ ಈ ಪಾತ್ರದ ಹೆಸರು ಇಚ್ಛಾ ಎಂದು. ಆದರೋ ನಡೆಯುವುದೆಲ್ಲಾ ಇಚ್ಛೆಯ ವಿರುದ್ಧವಾಗಿ! ಅವಳು ಒಂದು ಅನಂತ ಸಾಹಿತ್ಯ. ಅನನ್ಯ. ಆರ್ಥೈಸಿ ಕೊಳ್ಳಲಾಗದ ಅಸಂಖ್ಯ ಬಾಹುಗಳ ಹರಡಿದ ವಿಶಾಲ ವೃಕ್ಷ.ಆಕೆ ಒಂದು ಖಾಲಿ ಪುಟ ಎಂದು ತಪ್ಪುಗ್ರಹಿಸಿ ಚಿತ್ತಾರ ಗೀಚಿ ಹೋದವರೇ ಜಾಸ್ತಿ!ಆದರೆ ವಿಮರ್ಶಾತ್ಮಕ ಕತೆಯಲ್ಲ ಅದು, ವಿಧ್ವಂಸಕ!!ಬದುಕಿನ ವಿಡಂಬನೆ ನಿರಂತರವಾಗಿ ನಡೆಯುತಿತ್ತು! ಇಷ್ಟಕ್ಕೂ ಇಕೆ ಒಬ್ಬ ವೇಶ್ಯೆ. ಸರಿ, ವೇಶ್ಯೆಯಾದರೂ, ಎಲ್ಲರಿಂದಲೂ ಕಣ್ತಪ್ಪಿಸಿ ಜೋಪಾನ ಮಾಡಿದ ಮನಸ್ಸಿಗೂ ಒಂದು ನೋವೆಂಬುದು ಇಲ್ಲವೆಂಬ ತತ್ವ ಎಷ್ಟು ಸರಿ!ನೋವಿಲ್ಲದ ಮನಸ್ಸು ಈ ಜಗತ್ತಿನ ಅತೀ ಅನಾಥ ಮನಸ್ಸು!ಎಲ್ಲವ ಕಳೆದುಕೊಂಡ ಆ ಅನಾಥ ಮನಸ್ಸು!
ಬಿಡುವಿನ ಸಮಯದಲ್ಲಿ ಹಸಿರು ಸೀರೆಯ ಹೊದ್ದು ನಡುವಿನ ವಯ್ಯಾರ ತೋರುತ್ತಾ ಜಗದೆದುರಿಗೆ ಬೆನ್ನು ಹಾಕಿ ಗುಲ್ಮೋಹರ್ ಮರದ ಕೆಳಗೆ ಕಾಲು ನೀಡಿ ಕುಳಿತು ಹೂಗಳನ್ನು ಜಾಗರೂಕತೆಯಿಂದ ಆಯ್ದುಕೊಳ್ಳುತ್ತಾಳೆ ! ಹುಚ್ಚೇರೂತನಕ ಘಮವ ಒಳಗೆ ಎಳೆದುಕೊಳ್ಳುತ್ತಾ, ಅಂಗೈಯ ನೋಡಿ ಕಾಣದ ಸತ್ಯವ ಹುಡುಕುತ್ತಾಳೆ!ಅಪೂರ್ವಕ್ಕೊಮ್ಮೆ ವಾರೆಗಣ್ಣಲ್ಲಿ ಹಿಂದಿರುಗಿ ನೋಡುತ್ತಾಳೆ! ಸಾಂಕೇತಿಕವಾಗಿ ಹಿಂದೊಮ್ಮೆ ತಾನು ಅವಿಭಾಜ್ಯ ಅಂಗವಾಗಿದ್ದ ಜಗತ್ತಿನ ಜಗುಲಿಯನ್ನು ದೂರದೂರಿನ ಅತಿಥಿಯಂತೆ ತನ್ನದಲ್ಲದ ರಸ್ತೆಯಲ್ಲಿ ನಿಂತು ಇಣುಕಿ ನೋಡುತ್ತಾಳೆ! ಗುಲ್ಮೋಹರ್ ಪುಷ್ಪವೃಷ್ಟಿ ಆಗುತ್ತಲೇ ಇರುತ್ತದೆ!
ಇನ್ನೂ ಕೆಲವೊಮ್ಮೆ ಬೆಳಕಿನೊಡನೆ ಮುನಿಸಿಕೊಂಡಾಗ ತನ್ನದೇ ಕೋಣೆಯಲ್ಲಿ ಬಂಧಿಯಾಗುತ್ತಾಳೆ! ಇಷ್ಟದ ಸುಗಂಧವ ಮಣಿಕಟ್ಟಿಗೆ ಬಳಿದುಕೊಂಡು ಆಸ್ವಾದಿಸಿಕೊಳ್ಳುತ್ತಾಳೆ.ಕಿಟಕಿಯ ಹಳದಿಗಾಜಿನ ಮೂಲಕ ದಾಪುಗಾಲಿಡಿಸುವ ಸೂರ್ಯನ ಬೆಳಕನ್ನು ದ್ವೇಷಿಸಿ ಮುಖ ಅಡ್ಡ ತಿರುಗಿಸುತ್ತಾಳೆ! ಬಹು ಹಠ ಮಾರಿ ಹೆಣ್ಣು.ಎಲ್ಲ ಭವಬಂಧಗಳ ಕಿತ್ತೊಗೆದವಳಿಗೆ ಎಲ್ಲೆ ಎಲ್ಲಿದೆ?ಆದರೂ ಬದುಕಿನ ಮೇಲೆ ಹೇಸಿಗೆ ಉಂಟಾಗಿ ಕಾಲಿಗೆ ಕಟ್ಟಿದ ಗೆಜ್ಜೆ ಕೂಡ ಸರಪಳಿ ಎಂದೆನಿಸುತ್ತಿತ್ತು!
ಅಸಂಖ್ಯ ಬೆವರಿನಹನಿಗಳಿಗೆ ಸಾಕ್ಷಿಯಾಗಿದ್ದ ಢಾಳು ರಂಗಿನ ಹಾಸಿದ ಚಾದರ! ಹಳದಿ ಗಾಜಿನ ಹಳೆಯ ಕೊಠಡಿಯ ಶಾಶ್ವತ ಒಡತಿ ಆಕೆ.ಇವಳು ಒಂದರ್ಥದಲ್ಲಿ ಆಕಳಂಕಳು. ಇನ್ನೂ ಕೆಲವೊಮ್ಮೆ ನಿದ್ದೆಯಿಂದ ಎದ್ದು ಕೂತು, ಇವೆಲ್ಲವ ಒಪ್ಪಲಾಗದೇ ಬಿಕ್ಕಳಿಸಿ ಅತ್ತು ಮೈಯನ್ನು ತಣ್ಣೀರಡಿಯಲ್ಲಿ ನಿಂತು ಉಜ್ಜಿ ತನ್ನದಲ್ಲದ ತಪ್ಪಿನ ಪ್ರಾಯಶ್ಚಿತದ ಜೀತದಾಳಾದ ಕಥೆಯ ನೆನೆಯುತ್ತಾಳೆ!ಮುದ್ದೆಯಾದ ಸೀರೆಯ ಬಿಚ್ಚೊಗೆದು ಪ್ರಶಾಂತ ಮನಸ್ಥಿತಿಗೆ ಜಾರುತ್ತಾಳೆ..
ಆಕೆ ಹಾಗೂ ಜಗತ್ತನ್ನು ಹೊರತುಪಡಿಸಿ ಮೂರನೆಯವರ ದೃಷ್ಟಿಯಿಂದ ನೋಡಿದಾಗ ಅನಿಸೋದು ಒಂದೇ,ಯಾರು ನಿರ್ಮಲರು?ದೇಹ ಹೇಸಿಗೆಯಾದರೂ ಒಂದೇ,ಮನಸ್ಸಾದರೂ ಒಂದೇ.ಒಂದರ್ಥದಲ್ಲಿ ದೇಹಕ್ಕಿಂತ ಮನಸ್ಸಿನ ಕೊಳಕೇ ಭಯಾನಕ. ಇವಿಷ್ಟಕ್ಕೂ, ಇದೆಲ್ಲಾ ಹೊಟ್ಟೆಗಾಗಿ, ಗೇಣು ಬಟ್ಟೆಗಾಗಿ.
ಆಕೆಯ ಪಾತ್ರಗಳು,ಜವಾಬ್ದಾರಿಗಳು ಅಪಾರ! ಕೆಲವರು ಸ್ನೇಹಿತೆಯ ಹುಡುಕಿ ಬಂದರೆ, ಇನ್ನೂ ಕೆಲವರು ತಾತ್ಕಾಲಿಕ ಪ್ರೇಯಸಿಯ ಹುಡುಕಿ ಬರುತ್ತಾರೆ. ಇನ್ನು ಉಳಿದವರು ತಮ್ಮ ದುಃಖ ಮರೆಯಲು,ಬೇಸರ ತೀರಿಸಲು ಬರುತ್ತಾರೆ.ಆದರೆ ಆಕೆ ವಿಶ್ವಕೋಶ.ಅವಳಿಗೆ ತಿಳಿಯದೇ ಇರುವುದು ಏನಿಲ್ಲ.ಒಂದು ಪಕ್ಷ ಗೊತ್ತಿಲ್ಲವೆಂದರೂ ಗೊತ್ತು ಮಾಡಿಸಿ ಬಿಡುವ ಹುಚ್ಚು ಕುದುರೆ ಈ ಸಮಾಜ.ಕೆಲವೊಮ್ಮೆ ಕೂತೂಹಲದಿಂದ ಈಕೆಯೇ ಅವುಗಳ ಹಿಂದೆ ಹೋದ್ರೆ,ಇನ್ನೂ ಕೆಲವು ಇವಳ ಬೆನ್ನು ಬೀಳುತ್ತವೆ.ಇಲ್ಲಿ ಯಾರದೂ , ಯಾವುದೂ ತಪ್ಪಿಲ್ಲ. ಆದರೂ,ತಪ್ಪು ನಡೀತಾ ಇದೆ!
ಬಹುಪಾಲು ಏಕಾಂಕಿ ನಾಟಕ ಇದು.ಪಾತ್ರಗಳು ಬಹಳ, ಆದರೆ ಪಾತ್ರಧಾರಿ ಒಬ್ಬಳೇ!ಕೆಲವೊಮ್ಮೆ ಮನಸ್ಸಿನ ಸ್ಥಿತಿಯ ಮೇಲೆ ಸೀರೆಯನ್ನುಡುತ್ತಾಳೆ, ಸ್ಪಷ್ಟೀಕರಣಕ್ಕೆ! ಆಕೆ ಯಾರನ್ನೂ ಪ್ರಶ್ನಿಸುವುದಿಲ್ಲ,ಯಾರನ್ನೂ ಅಳೆಯೋಲ್ಲ! ಏಕೆಂದರೆ ಅವಳು ಪಾರದರ್ಶಕ.ಹಾಗಂತ ಸುಲಭವಾಗಿ ರಾಜಿನೂ ಆಗುವುದಿಲ್ಲ. ಮೊದಲೇ ಹೇಳಿದಂತೆ ಹಠಮಾರಿ ಹೆಣ್ಣು!
ಇಲ್ಲಿಯತನಕ ಯಾರೂ ಕೂಡ ಅವಳ ಮನದಾಳವ ಪರಿಕಲ್ಪನೆಯನ್ನೇ ಮಾಡಿಕೊಂಡಂತೆ ಇಲ್ಲ.ಬೆರಳಣಿಕೆಯಷ್ಟು ಜನ ಪ್ರಯತ್ನಿಸಿದರೂ,ಆ ಹೊತ್ತಿಗೆ ಅವಳು ಹಾಡು ಮುಗಿಸಿದ ಹಕ್ಕಿ.ಬಹುಶಃ ಈ ಮರ್ಮವನ್ನರಿತ ಜಾಣೆ ಏಕಕಾಲಕ್ಕೆ ಬದುಕ ನೋಡಿ ಅಳುತ್ತಾಳೆ, ನಗುತ್ತಾಳೆ. ಏಕಾಂಕಿ ಪ್ರಸಂಗದ ಕಲಾವಿದೆಯಾದರೂ,ಆಕೆ ಒಂಟಿಯಲ್ಲ.ಅದೆಷ್ಟೋ ಕಾಣದ,ಕೇಳದ ನಗು - ಅಳುಗಳು ಆಕೆಯನ್ನು ದಿಗ್ಭಂಧಿಸಿ ಆ ಕೋಣೆಯಲ್ಲಿ ಮೆರೆಯುತ್ತಿರುವಾಗ, ಒಂಟಿತನ ಎತ್ತಣದು?
ನಿದಿರೆ ಬರದ ಆ ಕಂಗಳಿಗೆ ಗಾಳಿಯೇ ಜೋಗುಳ.. ಅಪೂರ್ಣ ಚಂದಿರನೇ ತಾಯಿ! ಬಾಳ ರಾಗದ ಇಂಪನ ಕೇಳುವ ಕಾಲದಲ್ಲಿ, ಭೀಕರ ಕ್ರೌರ್ಯ ಕೇಳುವ ಆಷಾಢಭೂತಿ! ಉತ್ತರವಿಲ್ಲದ ಯಕ್ಷಪ್ರಶ್ನೆ ಅವಳ ಬದುಕು !
ಏನೂ ಅಂಟದ ನಿರ್ಮಲೆ. ಬೇಕಾಗಿದ್ದು ಗೌರವ, ಸಹಾನುಭೂತಿಯಲ್ಲ!ಸಾಗರದಲ್ಲಿ ಅವಳ ಪಾಲಿನ ಹನಿಯ ಹುಡುಕುವ ತರಹ ಅವಳು ಅದನ್ನು ಹುಡುಕುತ್ತಿರುವಾಗ,ಸುರಿಯುವುದು ಮಾತ್ರ ಸಹಾನುಭೂತಿಯ ಕ್ಷುದ್ರಮಳೆ.ಅನುದಿನ ಅವಳೊಳಗೆ ಕ್ರಾಂತಿ ಕಟ್ಟೊಡೆಯುತ್ತದೆ,ಎಲ್ಲವ ಹಿಸುಕಿ ಹಾಕಿ ಅಂತ್ಯ ಹಾಡ ಬೇಕೆನ್ನುವ ಕ್ರಾಂತಿ!ಗತವೆಲ್ಲ ಸ್ಮರಣೆಯಲ್ಲಿ ಕಣ್ಣಮುಂದೆ ಪ್ರಕಟಗೊಂಡಾಗ,ಅನಿಸುವುದಿಷ್ಟೇ..ಪಟ್ಟ ಕಟ್ಟುವುದು ಸುಲಭ, ನಿಭಾಯಿಸುವಿಕೆ ಕಷ್ಟವೆಂದು!
ಅವಳ ಕಣ್ಣಿಂದ ಜಗತ್ತೇ ಬೇರೆ.ತುಸು ಮಾನವೀಯತೆ, ದುಃಖ ಹೆಚ್ಚು.ಅನುಭವ ಅಪಾರ.ಎಲ್ಲವ ಮರೆಯುವ ತುಮುಲ.ಅವಳಿಗೆ ಓಡುವ ಕಾಲವ ನೆನೆದು ದಿಗಿಲು ಕೂಡ ಆಗುತ್ತದೆ.ಆಕೆಯ ದರ್ಪಣದಲ್ಲಿ ಎಲ್ಲವೂ ಸಿನೆಮಾದ ರೀಲುಗಳಂತೆ ಕ್ಷಣಮಾತ್ರದಲ್ಲಿ ಬದಲಾವಣೆ ಕೂಡ ಆಗುತ್ತದೆ.ಆಕೆಗೆ ನಿತ್ಯವೂ ಶೃಂಗಾರ. ಶೃಂಗಾರಕ್ಕೆಂದು ಕಟ್ಟಿದ ಅವಳದೇ ಗೆಜ್ಜೆ ಸಪ್ಪಳ ಮಳೆಗಾಲದ ಭೋರ್ಗರೆವ ಕಡಲಿಗಿಂತ ಭೀಕರ. ನಿತ್ಯವೂ ಶೃಂಗರಿಸಿ ಹಬ್ಬ ಮಾಡಿದರೆ,ಸಂಭ್ರಮ ಎತ್ತಣದು ?ಸಂತೋಷ ಕೇವಲ ಅಸತ್ಯ.
ಆಕೆಯ ಜಗತ್ತಿನಲ್ಲಿ ಇಷ್ಟ ಇರದಿದ್ದರೂ ವೇಷ ಧರಿಸಬೇಕು.ಆದರೆ ಚಪ್ಪಾಳೆ ತಟ್ಟಲು, ಅಭಿನಂದಿಸಲು ಪ್ರೇಕ್ಷಕರಿದ ಸನ್ನಿವೇಶ.ಎಲ್ಲವೂ ಅವಳೇ, ಸೂತ್ರಧಾರಿಯೊಬ್ಬನ ಬಿಟ್ಟು!ಕೆಲವೊಮ್ಮೆ ಚುಡಾಯಿಸುತ್ತಾಳೆ,ಕೆಲವೊಮ್ಮೆ ಕೆಲವೊಬ್ಬರ ಮೇಲೆ ಅವಳ ದಂಧೆಗೆ ವಿರುದ್ಧವಾದ/ನಿಷೇಧವಾದ ಪ್ರೀತಿ ಕೂಡ ಜನಿಸುತ್ತದೆ. ಸೃಷ್ಟಿ ಕ್ರಿಯೆಯ ತಡೆಯಲು ಯಾರಿಂದ ಸಾಧ್ಯ?
ಅಪರಿಮಿತವಾದ, ಅನಘವೆಂದೆನಿಸುವ ಅದಮ್ಯ ಏಕಾಂತವೇ ಅವಳ ಸಂಗಾತಿ.ಖಾಲಿ ಪುಟ ಅವಳ ದಂಧೆ.ಒಂದೂ ಅಕ್ಷರ ಮಾಸಿ ಹೋಗಿರಬೇಕು,ಇಲ್ಲವಾದಲ್ಲಿ ಬರೆಯದೇ ಇರುವಂತದ್ದು, ಇನ್ನೂ ಇಲ್ಲವಾದಲ್ಲಿ ಯಾರೂ ಬರೆಯಲಿಚ್ಚಿಸಲ್ಪಡುವಂತದ್ದು ಅಥವಾ ನಿರ್ವಿಕಲ್ಪ ಭಾವದಿಂದ ಹೇಳುವುದಾದರೆ ಬರೆದದ್ದು ಯಾರಿಗೂ ಕಾಣುವುದಿಲ್ಲ! ಅಸದೃಶ್ಯ!

Comments
Post a Comment