ಅಪಹಾಸ್ಯ
ಬರಿದಾದ ಬಂಜರು ಬಯಲು ಬಸಿರಾಗ ಬಯಸಿತಂತೆ,
ಕಹಿಯಾದ ಕನಸುಗಳ ದಿಬ್ಬಣ ಮೆರವಣಿಗೆ ಹೊರಟಿರಲು!
ಮಸಿತುಂಬಿದ ಮನಸಿಗೆ ಹಗುರಾಗಿ ಹಾರುವ ಆಸೆಯಂತೆ,
ಕಾರ್ಮೊಡದ ಕಾಳರಾತ್ರಿ ಕಣ್ಣಮುಂದೆ ಗೂಡು ಕಟ್ಟಿರಲು!
ಎಲ್ಲ ಮರೆತ ಕಲ್ಲು ಮನಸ್ಸು ತಪ್ಪಿ ಒಮ್ಮೆ ತಲ್ಲಣಿಸಿತಂತೆ,
ಹೃದಯ ಮಿಡಿಯುವದ ಮರೆತಿರಲು!
ಹುಣ್ಣಿಮೆ ಕಾಣದಿರುವ ಊರೊಂದು ಬೆಳದಿಂಗಳಿಗೆ ಹವಣಿಸಿತಂತೆ,
ಸಮಸ್ತ ತಾರಾಗಣವೇ ಅಲ್ಲಿಯ ದಾರಿ ಮರೆತಿರಲು!
ಒಂಟಿ ಮನಸ್ಸಿಗೂ ಮನಸ್ಸ ಬೆಸೆಯುವ ಯೋಚನೆಯಂತೆ,
ಆಡದ ಮಾತೆಲ್ಲವೂ ಎಂದೋ ಮುಗಿದಿರಲು!
ನಗಲು ಬಾರದವನಿಗೆ ದುಃಖ ಮುಗಿಯುವ ಹಂಬಲವಂತೆ,
ಖುಷಿಯೆಲ್ಲ ಕಾಣದ ದಾರಿಯಲ್ಲಿ ಕಾದಿರಲು!
ಕವಿಗೂ ತನ್ನೊಳಗಿನ ಭಗ್ನ ಪ್ರೇಮಿಯ ಹುಡುಕಾಟ ವಂತೆ,
ಪ್ರೀತಿಸುವ ಕಲೆಯೇ ಬಾರದಿರಲು!
Comments
Post a Comment