ಹಾಡಲು ಬಾರದ ಕೋಗಿಲೆ 💛

                 ಮೋಡವಿರದ ಬಾನಿನ ತಪ್ಪೇನು?ಹೂವು ಬಿಡದ ಗಿಡದ ಗತಿಯೇನು?ಹಾಡಲು ಬಾರದ ಕೋಗಿಲೆಯ ಕತೆಯೇನು?
                   ಪ್ರಶ್ನೆ ಎಂಬುದು ಶರಧಿಯ ಅಲೆಗಳಂತೆ ಲೆಕ್ಕವಿಲ್ಲದಷ್ಟು ಅನಂತ.ಮನಸ್ಸಿನ ಗೋಡೆಗೆ ಬಂದು ಅಪ್ಪಳಿಸುತ್ತಲೇ ಇರುತ್ತದೆ.ಅಷ್ಟಕ್ಕೂ ಪ್ರಸ್ತುತ ಪ್ರಶ್ನೆ ಹಾಡಲು ಬಾರದ ಕೋಗಿಲೆಯೂ ಒಂದು ಕೋಗಿಲೆಯೇ?
                ಒಮ್ಮೆ ಈ ಕೋಗಿಲೆ ಕೂಡ ಒಡನಾಡಿಗಳಂತೆ ಹಾಡಲು ಪ್ರಯತ್ನಿಸಿತು, ಚೀರಿತು, ಕಣ್ ಪನಿಗಳ ಧಾರೆ ಹರಿಸಿತು,ಹಠ ಹಿಡಿಯಿತು,ವೃತ ಗೈದಿತು.. ಆದರೂ ಸ್ವರ ಬತ್ತಿಹೋದ ಕಂಠ ಅದರ ಪಾಲಿಗೆ ಬಂದಿತ್ತು.. ಅಷ್ಟಕ್ಕೂ ಕೋಗಿಲೆಯ ಕಾಯಕ ಕೇವಲ ಗಾಯನವೇ? ಜಗತ್ತು  ಅದರ ವಿಭಜಿತ ವ್ಯಕ್ತಿತ್ವ ವನ್ನು ನೋಡಲು ತಿರಸ್ಕರಿಸಿದಂತಿದೆ! ಏಕಾಂತವನ್ನರಸಿ ಕೊಂಬೆಯ ತುದಿಗೆ ಕುಳಿತ ಕೋಗಿಲೆ ಕಾಣದ ಕಿವಿಗಳಿಗೆ ಇಂಪಿನ ತಂಪೆರೆಚಬೇಕೆ?ಅನುದಿನ ಹಾಡುವ ಬೇರೆ ಕೋಗಿಲೆಗಳ ಜೀವನದ ಒಳಅರ್ಥ ಅವು ಹಾಡುವ ಹಾಡಲ್ಲಿ ಅಡಗಿದೆಯೇ? ಸತ್ಯಕ್ಕೂ ಭೂತಗನ್ನಡಿ ಬೇಕೇ? ಕೋಗಿಲೆಗೆ ಗಾಯಕ/ಗಾಯಕಿ ಎಂಬ ಗುರುತಿನ ಹಣೆಪಟ್ಟಿ ಬೇಕೇ? ಪಟ್ಟ್ಟಿ ಕಳಚಿದ ಕೋಗಿಲೆ ನಿಜವಾಗಿಯೂ ಮುಕ್ತಾಕಾಶದಲ್ಲಿ ಬಹುಎತ್ತರಕ್ಕೆ ಹಾರುವ ಸ್ವತಂತ್ರಪಕ್ಷಿ!ಬಂಧನಗಳೆಲ್ಲವ ಕಿತ್ತೊಗೆದು ಮುಗಿಲೆತ್ತರಕ್ಕೆ ಹಾರಬಲ್ಲದು!ಆದರೆ ಹಾಡಲು ಬಾರದ ನೀನು ಹಾರಿಯಾರೂ ಎನುಮಾಡಬಲ್ಲೆ ಎಂಬ ಆತ್ಮವಿಮರ್ಶೆಯ ಪಾಠವ ಉಚಿತವಾಗಿ ನಾವೇ ನೀಡುತ್ತೇವೆ!
                 ಅಷ್ಟಕ್ಕೂ ಸಂಗೀತ ಒಂದು ತಪಸ್ಸು!ತಪಸ್ಸಿನ ಫಲ ದಕ್ಕದ ಕೋಗಿಲೆ ಮೌನಿಯಾಯಿತು.ಸಂಗೀತ ಜತನವಾಗಲಿಲ್ಲ! ಹಾಡಲಾರದ ಅದರ ಪಾಡು ದೇವರಿಗೇ ಪ್ರೀತಿ!ತನಗಾಗಿ ಬದುಕುವ ಕೋಗಿಲೆ ಈ ಕೋಗಿಲೆ. ಹಾಡದೇ ಬದುಕುವ ಕೋಗಿಲೆ! ಸಂಗಾತಿಗಳ ಆಲಾಪವ ಆನಂದಿಸಿ ಅನುಭವಿಸಿ ಬದುಕುವ ಕೋಗಿಲೆ. ಸದಾ ಮೌನಿಯಾದರೂ ಅಂತರಂಗದಲ್ಲಿ ಮಾರ್ದನಿಸುವ ತರಂಗಗಳು ಸಂಗೀತ ಸ್ವರಗಳ ಪ್ರವಾಹಕ್ಕಿಂತ ಭೀಕರ! ಪುಟಿದೇಳುವ ಅಸಮಾಧಾನದ ಹೊಗೆಯಿಂದ ಕೊರಳು ಕಟ್ಟಿ ಕೋಗಿಲೆ ಅಸ್ತಿತ್ವವನ್ನೇ ಮರೆತಂತಿದೆ!
              ಹಾಡಲಾರದ ಕಂಠ ಲೋಕದ ದೃಷ್ಟಿಯಲ್ಲಿ ಆಶ್ಚರ್ಯಗಳ ಆಗರ.ಆದರೆ ನೂನ್ಯತೆ ಗಳಿದ್ದ್ದರೂ ತನ್ನಷ್ಟಕ್ಕೇ ತಾನೇ ಪರಿಪೂರ್ಣ ಈ ಕೋಗಿಲೆ.ಸಹಜ ಸುಂದರ!ಕೆಲವೊಮ್ಮೆ ಈರ್ಷ್ಯೆ,ಕೆಲವೊಮ್ಮೆ ಇಬ್ಬಂದಿ ವ್ಯಕ್ತಿತ್ವ! ಹಾಡಲಾರದೆ,ಹಾರಲಾರದೇ ಮೈ ಕಂಪಿಸಿದರೂ ರೆಂಬೆಯ ತುದಿಯ ಪರಿವೀಕ್ಷಕ ಈ ಕೋಗಿಲೆ! ಮೌನರಾಗವ ತನ್ನಲ್ಲೇ ಹಾಡಿ, ಪ್ರೇಕ್ಷಕರಿಲ್ಲದ ಬಾಂದಳದ ತುದಿಯಲ್ಲಿ ಕುಣಿದು ಗೂಡು ಸೇರಿ ದಿನದು ದ್ದದ ಭಾವನೆಗಳ  ಕ್ರೋಢಿಕರಿಸುವ ಕೋಗಿಲೆ ಮರುದಿನದ ಸಂಗ್ರಾಮಕ್ಕೆ ಮತ್ತೊಮ್ಮೆ ಅಣಿಯಾಗುತ್ತದೆ!

Comments

Popular posts from this blog

ಇಷ್ಟಪಡೋದಾ?? ಇಷ್ಟವಾಗೋದಾ?

ಮಬ್ಬು

ಆಂತರ್ಯ