ಅಗಲುವಿಕೆ ನಿತ್ಯ ಸ್ಥಾಯಿಯೇ?
ತಂತಿ ಮುರಿದ ವಾದ್ಯದಿಂದ ಹಿಂದೊಮ್ಮೆ ಜನ್ಮಪಡೆದ ಸ್ವರದ ಅಸ್ತಿತ್ವ ಸುಳ್ಳೇ?ಎಂದಿಗಾದರೂ ಸ್ವರಕ್ಕೆ ಮಾಜಿ ತಂತಿಯ ನೆನಪಾಗದೇ ಹೋದೀತೆ?ಬೇರೆ ವಾದ್ಯದಿಂದ ಜಗತ್ತನ್ನು ಧುಮ್ಮಿಕ್ಕಿ ಪ್ರವೇಶಿಸಿದರೂ ಸ್ವರಕ್ಕೂ , ಮುರಿದ ತಂತಿಯ ಸಂಬಂಧ ಮರೆತು ಹೊದೀತೆ?ಹಾವಕ್ಕೂ ಭಾವಕ್ಕೂ ತಾಲಮೇಳವಿಲ್ಲದ ನಟನೆ ಎಂದರೆ ಸ್ವರದ ಎದೆಯಿಂದ ತಂತಿಯ ನೆನಪು ನಶಿಸುವಿಕೆ!
ಹಿಂದೊಮ್ಮೆ ಸ್ವರ ತಂತಿಗಳೆರಡು ಎದೆಗಪ್ಪಿ ನಲಿದಾಡಿದ ಕಾಲವು ಸ್ಮೃತಿ ಪಟಲದಲ್ಲಿ ಅಷ್ಟು ಕೃಷ ವಾಗಿತ್ತೇ?ಪಂಜರದಲ್ಲಿದ್ದ ಹೃದಯವು ತಾಳಲಾರದೇ ಹೊರಗೆ ಬಂದು ಬೆಸೆದುಕೊಂಡ ಬಂಧವು ಇಂದು ಅವರ ಬಾಳಿನಿಂದ ವಿಮುಕ್ತಿಯಾದೀತೆಂಬುದು ಅತಿಶಯೋಕ್ತಿ. ಅಗಲಿಕೆಯೇ ಭವಿಷ್ಯವೆಂದರಿಯದ ವರ್ತಮಾನ ಅದೆಷ್ಟು ಮುಗ್ಧ!ತಂತಿಯ ಕನಸಲ್ಲೂ ಮುಂದಿನ ಪುಟಗಳ ಕತೆಯ ಕುತೂಹಲ ಹೆಚ್ಚಿಸಿ,ಕಮರಿದ ಕನವರಿಕೆಗಳ ಕೆದಕಿದ ಸ್ವರ ಇಂದಿಗೂ ತಾನೊದ್ದು ಮಲಗುವ ಶೀತಲ ರಾತ್ರಿಗಳ ಒಂದು ಎಳೆಯಲ್ಲಿ ತಂತಿಯ ಜೀವಂತವಿಡಿಸುತ್ತದೆ!
ಸ್ವರಕ್ಕೂ ಅದೊಂದೇ ಆಸರೆಯಾದ ತಂತಿಯಲ್ಲ!ಮುರಿದ ತಂತಿಯು ಹೊರಡಿಸಿದ್ದು ಇನ್ನೂ ಅನೇಕ ಸ್ವರಗಳ! ಆದರೆ "ಆ" ಸ್ವರವು ತನ್ನದೆನ್ನುವ ಚಿತ್ರಣ ಕೈಗೆಟುಕದೇ ಇದ್ದಾಗ ಆದ ನೋವು ಅಪರಿಮಿತ!"ಆ" ಸ್ವರದಿಂದ ತಿರಕರಿಸಲ್ಪಟ್ಟ ತಂತಿಗೆ ಮುರಿದು ಬಿದ್ದ ಉಳಿದ ತಂತಿ ಸ್ವರಗಳ ಸಂಬಂಧ ಅಪ್ರಸ್ತುತವೆನಿಸುತ್ತಿತ್ತು! ಸಂತೋಷೋನ್ಮಾದದಿಂದ "ಆ" ಸ್ವರವ ಪ್ರವಹಿಸುತ್ತಿದ್ದ ತಂತಿಗೆ ಇನ್ನಾವುದೋ ಸ್ವರ ಜವಾಬ್ದಾರಿಯೆಂದಿನಿಸುವುದು ಸ್ವಾಭಾವಿಕ! ಸ್ವರಕ್ಕೂ ಸ್ವಂತಿಕೆ ಎಂದರೆ ಆ ಮುರಿದುಬಿದ್ದ ತಂತಿಯೇ! ಮುರಿದುಬಿದ್ದೊಡೆ ಮುನಿಸಿ ಸ್ವರ ತಂತಿಗಳು ದೂರಾದವು,ಅನಾಥ ಸಂಗೀತ ವಿಷಾದ ನಗೆಯ ಬೀರಿತು!
ತಂತಿ ಮುರಿದು ಬಿದ್ದಾಗ ಅದು ಹೊಸದೊಂದು ಲೋಕವನ್ನೇ ನೋಡಿತಂತೆ. ಹಳೆಸ್ವರದ ಕುರುಹುಗಳು ಬಹಳ ಕಾಡಿದರೂ ಕೈಚಾಚಿದಷ್ಟೂ ಮರೀಚಿಕೆಯಾಗಿತ್ತು. ಬುದ್ಧಿವಂತರಿಗೆ ಇದರಲ್ಲೊಂದು ವೇದಾಂತ ಅಡಗಿತ್ತು. ಪರಿಸ್ಥಿತಿ ಇತ್ತ ತಂತಿಯ ಯೋಚನಶಕ್ತಿಯ ಜಂಘಾಬಲವನ್ನೇ ಅಡಗಿಸಿತ್ತು.ಸ್ವರಕ್ಕೆ ಪಶ್ಚಾತ್ತಾಪದ ಉಡುಗೊರೆಯೊಂದು ಬಯಸದ ಬಳುವಳಿಯ ಮೂಟೆಯಾಗಿ ಬೆನ್ನೇರಿತ್ತು. ಪ್ರೇರೇಪಣೆ ಹುಡುಕಿ ಹೊರಟ ಕವಿಗೆ ಅಗಾಧ ಶಕ್ತಿ ನೀಡಿದ ಖನಿಜವಾಗಿತ್ತು.ಯಾರದ್ದೋ ನೋವು,ಇನ್ನ್ನಾರದ್ದೋ ಕಲಿಕೆ.ಯಾರದ್ದೋ ಕತೆ, ಇನ್ನಾರಿಗೋ ಖಂಡಕಾವ್ಯ.
ಮಿಲನದ ಸುಮಧುರ ಕವನಕ್ಕಿಂತ ಭೀಕರವಾದ ವಿರಹರಾಗವ ನುಡಿಸುವುದು ಸ್ವರ ತಂತಿಗಳಿಗೆ ಅನಿವಾರ್ಯ.ಆ ಸ್ವರ ನುಡಿಸಿದ ನೆನಪಾದೊಡೆ, ಪ್ರತಿದಿನವೂ ಅಂತರಂಗದ ಭಿತ್ತಿಗಳಲ್ಲಿ ತಂತಿಗೆ ಓಕುಳಿಯಾಟ.ತಂತಿಗೂ ಸ್ವರದ ಮೇಲೆ ಅತೀವ ಸೆಳೆತ.ತುಸುಕಾಲ ರಾಗತಾಳಗಳಲ್ಲಿ ನಂಬಿಕೆ ಹುಟ್ಟಡಗಿದ ಮೇಲೆ ಮತ್ತೆ ಅದೇ ಸ್ವರದ ಮಾಂತ್ರಿಕತೆಗೆ ಜೋತುಬಿದ್ದು ಮಾರುಹೋಗುವ ತಂತಿ. ಸ್ವರಕ್ಕೂ ತಂತಿ ಮುರಿದರೂ ,ಅರ್ಥವಾಗದ ಸಮರ್ಪಣಾ ಭಾವ! ಹೀಗಿರುವಾಗ ಕ್ಷಣಿಕವೆಂದೆನಿಸುವ ಅಗಲುವಿಕೆ ಬಾನಂಗಳದಲ್ಲಿ ತಾರೆಗಳ ತೇರಲ್ಲಿ ಮಿಂಚಿ ಮರೆಯಾಗುವ ಚಂದ್ರಮನಂತೆ. ಆಗಲಿಕೆ ಎಂದೂ ಪರಿಪೂರ್ಣವಲ್ಲ, ನಿತ್ಯಸ್ಥಾಯಿಯೂ ಅಲ್ಲ!ಆದರೆ ತಂತಿಯ ಜೊತೆಗಿದ್ದೂ ಅನಾಥ ಭಾವವ ಜೀರ್ಣಿಸಿಕೊಳ್ಳಲಾಗದೇ, ಅಗಲದೇ ಇರುವ ಬೇರೆಸ್ವರಗಳಿಗೆ ಅಗಲುವಿಕೆಯ ಯಮಸ್ವರೂಪಿ ದರ್ಶನವಾಗುವುದು.ಜನರ ದೃಷ್ಟಿಯಲ್ಲಿ ಎಂದೋ "ಆ" ಸ್ವರ ಹೊರಡಿಸವುದ ನಿಲ್ಲಿಸಿದ ತಂತಿಯ ಭಾವವೊಂದು ಅಸಂಪ್ರದಾಯಿಕ ಪ್ರೇಮಕಾವ್ಯವಾದರೆ,ದೂರದಲ್ಲಿ ರಾಜೀನಾಮೆ ಇತ್ತ ಸ್ವರದ ಮನದಾಳ ಇನ್ನೂ ನಿಗೂಢ.ಒಟ್ಟಿಗೆ ಇರದೆಯೂ ಬೆಸೆದುಕೊಂಡ ಸಂಬಂಧ ಇನ್ನೂ ಜೀವಂತವಿರುವಾಗ ,ಅಗಲುವಿಕೆಯ ಅಡಿಯಲ್ಲಿ ಇದನ್ನು ಪ್ರಯತ್ನಪೂರ್ವಕವಾಗಿ ಸೇರಿಸುವುದು ತಪ್ಪಲ್ಲವೇ?
ಮುಂದೆಂದಾದರೂ ತಂತಿ ಹಳೇ ಸ್ವರವನ್ನು ನುಡಿಸಿತೆಂದಾದರಲ್ಲಿ, ಪ್ರೇರಪಣೆ ಪಡೆದ ಕವಿಯ ಮನದಾಳದ ಸುನಾಮಿಗೆ ಎಲ್ಲವನ್ನರಿತ ವೇದಾಂತಿ ಉತ್ತರವಾಗಬಲ್ಲನೇ?
Comments
Post a Comment