ಪ್ರತೀಕ್ಷೆ
ಹನಿಗೆ ಹರಿದು ಅರ್ಣವನ ಸೇರುವ ಪ್ರತೀಕ್ಷೆ,
ಅರ್ಣವನಿಗೆ ನೀಲಮೇಘವಾಗಿ ತೇಲುವ ಪ್ರತೀಕ್ಷೆ!!
ಭೂತಕ್ಕೆ ಭವಿಷ್ಯದ ಚಪ್ಪರದ ಪ್ರತೀಕ್ಷೆ,
ವರ್ತಮಾನಕ್ಕೆ ಭೂತದ ಪುಟಗಳ ಬಿಚ್ಚುಕೊಳ್ಳುವಿಕೆಯ ಪ್ರತೀಕ್ಷೆ||
ತೆರೆದೋದದ ಪುಟಗಳ ನಡುವೆ ಮುದುಡಿ ಕುಳಿತ ಬೀಗಕ್ಕೆ ಬೀಗದ ಕೈಯ ಪ್ರತೀಕ್ಷೆ,
ತನ್ನೊಲವಿಗೆ ಮನಸುಗಳ ಉದ್ಯಾನವನದಲ್ಲಿ ಕಂಪು ಪಸರಿಸಲು ಪ್ರತೀಕ್ಷೆ!!
ಬರಡು ರಂಗಮಂದಿರದಲ್ಲಿ ಭಾವನೆಗಳ ನರ್ತನ ಅರ್ಥೈಸಿಕೊಳ್ಳಲು ಕಲಾವಿದನಿಗೆ ಬತ್ತದ ಪ್ರತೀಕ್ಷೆ,
ಸಮಯದೋಟದ ಹರಿವ ತಡೆಯಲು ಕಾಲಜ್ಞಾನಿಗೆ ಪ್ರತೀಕ್ಷೆ||
ಜೀವಂತ ಪಾತ್ರಗಳಿಗೆ ಖಂಡಕಾವ್ಯದೊಳಗೆ ನುಗ್ಗುವ ಪ್ರತೀಕ್ಷೆ,
ನಿರ್ಜೀವ ಅಕ್ಷರಗಳಿಗೆ ಭೂರಮೆಗೆ ಬಂದು ಮೆರೆದಾಡುವ ಪ್ರತೀಕ್ಷೆ!!
ದುಃಖಕ್ಕೆ ಕರಗಿ ಹರಿಯುವ ಪ್ರತೀಕ್ಷೆ,
ಸುಖಕ್ಕೆ ತನ್ನಯ ಆಯುಷ್ಯ ವೃದ್ಧಿಯ ಪ್ರತೀಕ್ಷೆ||
ಕಳ್ಳೀಗಿಡಕ್ಕೆ ರುಚಿಯಾದ ಹಣ್ಣುಬಿಡುವ ಪ್ರತೀಕ್ಷೆ,
ಮನ್ವಂತರಕೆ ಮಗದೊಮ್ಮೆ ಮರುಕಳಚುವ ಪ್ರತೀಕ್ಷೆ!!
ಗೌಪ್ಯತೆಗೆ ಜನಪ್ರಿಯತೆಯ ಪ್ರತೀಕ್ಷೆ,
ಅದೇ ದಂತಕತೆಗೆ ಸತ್ಯವಾಗಿ ಶಾಶ್ವತಸ್ಥಾನಿಯಾಗುವ ಪ್ರತೀಕ್ಷೆ||
ಮರಳಿಗೆ ಅಲೆಗಳ ಮುನ್ನುಗ್ಗಿ ತನ್ನ ಬಾಹುಬಲವ ವಿಸ್ತರಿಸುವ ಪ್ರತೀಕ್ಷೆ,
ಭಗ್ನಪ್ರೇಮಿಗೆ ನೆನಪ ಪರ್ವತ ಕರಗುವ ಪ್ರತೀಕ್ಷೆ!!
ಕವಿಗೆ ಕವಿತೆಯ ಸುಂದರ ಅಂತ್ಯದ ಪ್ರತೀಕ್ಷೆ,
ಬೆಳಕಿಗೆ ಕಾರ್ಗತ್ತಲ ಚದುರಿಸಿ ಮುನ್ನುಗ್ಗುವ ಪ್ರತೀಕ್ಷೆ||
ನಿರ್ಲಕ್ಷಿಸಲ್ಪಟ್ಟ ಮಾತುಗಳಿಗೆ ಮುಖ್ಯಭೂಮಿಗೆ ಬರುವ ಪ್ರತೀಕ್ಷೆ,
ಕಪ್ಪು ಬಿಳುಪಿನ ಛಾಯಾಚಿತ್ರಕ್ಕೆ ವರ್ಣಗಳಲ್ಲಿ ಮಿಂದೇಳುವ ಪ್ರತೀಕ್ಷೆ!!
ನಿರ್ಮೋಹಕ್ಕೆ ಮೋಹವ ಆಲಂಗಿಸುವ ಪ್ರತೀಕ್ಷೆ,
ದಿಕ್ಕಿಲ್ಲದ ಆಲೋಚನೆಗೆ ಅನುಷ್ಟಾನವೆಂಬ ನೆಲೆಯ ಪ್ರತೀಕ್ಷೆ||
ಕರಗಿದ ಚಂದ್ರನಿಗೆ ಪೂರ್ಣತೆಯ ಪ್ರತೀಕ್ಷೆ,
ಇತ್ತ ಧೂಳಿನ ಕಣಕ್ಕೆ ನಭೋಮಂಡಲದಲ್ಲಿ ಒಂದಾಗುವ ಪ್ರತೀಕ್ಷೆ!!
ಆಡದ ಮಾತುಗಳಿಗೆ ಎಲ್ಲವ ಮೌನದ ಸೋಗಿನಲ್ಲಿ ವ್ಯಕ್ತಿಗತಗೊಳಿಸುವ ಪ್ರತೀಕ್ಷೆ,
ವೇದಾಂತಕ್ಕೆ ಜಾನಪದದ ಜೊತೆಗೂಡುವ ಪ್ರತೀಕ್ಷೆ||
ಅಷ್ಟಕ್ಕೂ ಅಪೇಕ್ಷೆಯಿಲ್ಲದ ಪ್ರತೀಕ್ಷೇ ಯಾವುದು?ಕಾಲಗರ್ಭದಲ್ಲಿ ಉತ್ತರ ಇನ್ನೂ ದಕ್ಕದು!!!!
Comments
Post a Comment