ಮುಗಿಯದೀ ಶಿಕಾಯತು

  
ಅಸ್ಪಷ್ಟ ನೆನಪಿಗೆ ಪ್ರೀತಿಯ(?) ಉರುಫ್ ಮನದಾಳದ ಪತ್ರ.

    ಅವಶ್ಯಕತೆಗಿಂತ ಮೀರಿ ಪ್ರೀತಿ ಆದ್ರೆ ಉಳಿದ ಪ್ರೀತಿನ ಬೀಸಾಡಲು ಆಗುತ್ತದೆಯೇ?ಪ್ರೀತಿ ಉಂಟಾಯಿತು, ಮಾಡಿದೆ.ಪ್ರೀತಿಯ ಬಗ್ಗೆ ಬರೆಯಲು ಅರ್ಹಳು ಹೌದೋ ಅಲ್ವೋ ಅಂತ ಅರಿವಿಲ್ಲ.ಪತ್ರವನ್ನ ಓದಿದವರೆಲ್ಲ ಇದನ್ನು ಒಂದು ಪ್ರೇಮಿಯ ಅಹವಾಲು ಪತ್ರ ಎಂದು ಸ್ವೀಕರಿಸಬಹುದು.ಪ್ರೀತಿ ತುಂಬಾ ಅವಶ್ಯ,ಅತಿ ಅವಶ್ಯ ಅಂತ ತಲೆಮೇಲೆ ಹತ್ತಿ ಕುಳಿತಾಗ ಅನಿಸಿತ್ತು.ಒಂದು ಪ್ರಮಾಣದ ಖುಷಿಯನ್ನು ಕೂಡ ಕೊಡ್ತು.ಇಲ್ಲಾಂದ್ರೆ ಬಿಟ್ಟುಬಿಡುತಿದ್ದೆ.ಪ್ರೀತಿಸೋ ಜೀವಕ್ಕೆ ಸ್ಪಂದಿಸದೇ ಇರೋದನ್ನ ಅನಾಗರೀಕತೆ ಅನ್ನಬಹುದೆ?ಸಂಬಂಧಗಳ ಆಳವನ್ನು ವಿಸಂಕಲಿಸಲ್ಪಡಬಹುದೆ? ಬೇಡ ಅಂದಿದ್ರೆ ಪ್ರೀತಿ ಅನ್ಯತಾ ಭಾವಿಸುತ್ತಿತ್ತೆ?
        ಕೃತಕವಾಗಿಯಾದರೂ ಸೈ, ಪ್ರೇಮಿಸುವುದು ಕಷ್ಟಸಾಧ್ಯವೇ?ಅಳತೆಯ ಅಳುಕುಕಟ್ಟಿಕೊಂಡವಗೆ ಪ್ರೀತಿಯು ಕೇವಲ ನೀರ ಮೇಲಣ ಗುಳ್ಳೆ.ಪ್ರೀತಿಯೇ ಖುದ್ದು ನೀಡಿದ ಆಮಂತ್ರಣವ ಧಿಕ್ಕರಿಸಿ ಕನಸಿನೂರಿನ ದಾರಿಗೆ ಕಲ್ಲುತೂರಬೇಕಿತ್ತೇ?ಹೃದಯ ಅಂತ ಇದೆ ಅಂದಮೇಲೆ ಪ್ರೀತಿ ಮಾಡ್ತೀವಿ. ಪ್ರೇಮಿಗೆ ಪ್ರೀತಿ ಯಾವಾಗಲೂ ಸ್ವಂತ. ಆದರೆ ಪ್ರೀತಿಗೆ ಪ್ರೇಮಿ ಎಂದೂ ಸ್ವಂತವಲ್ಲ.ಅದು ವ್ಯತ್ಯಯಸಾಧ್ಯ.ಹೃದಯದ ಭಾಷೆ ಅರಿಯೋದಕ್ಕೆ ಗೊಂದಲ ಯಾಕೆ ಉಂಟಾಗಬೇಕು?ನಿನ್ನಿಂದ ಪ್ರೇಮವನ್ನು ತಿರುಗಿ ಬಯಸಿದ್ದು ದುರಾಸೆ ಅನಿಸಿದರೂ ದುನಿಯಾ ಓಡೋ ಹಳಿನೇ ಇದು.ಪ್ರೀತಿಯ ಸಮಗ್ರ ಜವಾಬ್ದಾರಿನಾ ಒಂದೇ ಹೃದಯದ ಮೇಲೆ ಹಾಕಿದ್ರೆ ಹಿಡಿದುಕೊಳ್ಳುವ ಸಾಮರ್ಥ್ಯ ಅದಕಿದ್ಯ? ಅಪರಿಮಿತವಾದ ದೂರುಗಳ ಪಟ್ಟಿಮಾಡಿ ನಿನ್ನಿಂದ ಸಿಗದ ಅದೇನನ್ನೋ ನೀರಿಕ್ಷಿಸುವೆ.ಅಷ್ಟಕ್ಕೂ ದೂರಲು ನೀನು ಆರೋಪಿಯೇ?ಹೌದು.ಏಕೆಂದರೆ ಪ್ರೀತಿ ಎಂಬ ವಿಷ ಜಂತುವಿನ ಸೃಷ್ಟಿ ಕ್ರಿಯೆಯ ರೂವಾರಿ ನೀನು.ಅಪರಾಧ ಎಸಗಿದವ ಅಪರಾಧಿಯೇ!
              ಪ್ರೀತಿಸಿದೆ ಎಂಬೋದು ನನ್ನ ಸ್ವಾತಂತ್ರ್ಯ ಎನ್ನುವುದಕ್ಕಿಂತ ಎಲ್ಲಿ ಈ ಹೃದಯವೇ ಛಿದ್ರವಾಗಿ ಹೋದಿತೆಂದು ಕಾದು ಕಾದು ಬೇಡದ ಜವಾಬ್ದಾರಿಗೆ ಗಂಟು ಬಿದ್ದಿರುವೆ. ನನ್ನ ಹೃದಯವ ಕಾದಿಕೊಳ್ಳುವುದು ಕೂಡ ಹಳೆಯ ಋಣ ಎಂಬಂತಿರುವ ಜವಾಬ್ದಾರಿ ಎಂದೆನಿಸಿದೆ. ಪ್ರೀತಿ ಮಂಪರಿನ ಸ್ಥಿತಿ. ಎಲ್ಲ ಗೋಜಲು. ಅಸ್ಪಷ್ಟ. ಪ್ರೇಮಿಸಿದವನೂ ಇದಕ್ಕೆ ಹೊರತಲ್ಲ.ದೂರುಗಾತಿ ಎಂದೆನಿಸಬಹುದು.ಆದರೆ,ನಾನು ಹಾಗೂ ನನ್ನ ಹೃದಯದ  ಅಹವಾಲನ್ನು ಸ್ವೀಕರಿಸುವವರು ಯಾರು?
                ಹೀಗೆ ಒಮ್ಮೆ ಹಗಲುಗನಸಿನ ದಾರಿಯಲ್ಲಿ ಅಲೆಯುತಿದ್ದೆ.ಪ್ರೀತಿ ಎದುರಿಗೆ ಬಂದು ನಿಂತಿತು. ಅಡ್ಡಗಟ್ಟಿತು. ಏನು ಬೇಕೆಂದು ಪ್ರಶ್ನಿಸಿದೆ.ಬಂದ ಉತ್ತರ ತನ್ನದೆಂಬ ಹೃದಯ ಬೇಕು.ಭಾವನೆಗಳ ಹರಿಬಿಡಲು ಇನ್ನೊಂದು ಪ್ರೇಮಿ ಪಾತ್ರ ಬೇಕೆಂದಿತು.ಬಹಳ ಮುತ್ಸದ್ಧಿ ಪ್ರೀತಿ.ಹೀಗೆ ಪ್ರೀತಿ ಹೃದಯದ ಪ್ರಾಕಾರಗಳಲ್ಲಿ ತಿರುಗಿ ತನ್ನಸ್ಥಾನವ ಭದ್ರಪಡಿಸಿಕೊಂಡಿತು.ಈ ಹೃದಯಕ್ಕಾಗಲೀ ಅಥವಾ ಅದರ ಉಪ ಉತ್ಪನ್ನವಾದ ಪ್ರೀತಿಗಾಗಲೀ ಆವಾಸಸ್ಥಾನ ದೊರಕುವ ತನಕ ಕೆಲಸವಿಲ್ಲ. ಬಹಳ ಪುರುಸೊತ್ತು.ಅದೇ ಒಮ್ಮೆ ನೆಲೆ ಊರಿತೆಂದರೆ ಕಿತ್ತು ತಿನ್ನುವ ಕ್ರಿಮಿ.
                 ಹೃದಯದ ಬಡಿತ ನಿಂತಾಗಲಷ್ಟೇ ನೆನಪಿಸಿಕೊಳ್ಳುವ ಹೃದಯವ ಅನುದಿನವೂ ನೆನೆದು ಕೊಳ್ಳುವಂತೆ ಮಾಡಿದ್ದು ಈ ಕುಹುಕ ಪ್ರೇಮ.ಒಂದುದಿನವೂ ಸ್ಪಂದನೆಯಿಲ್ಲದ ಪ್ರೇಮವಿದು,ಸ್ಪಂದಿಸದ ಪ್ರೇಮಿಯಿವನು,ತನಗಿಲ್ಲಿ ಭವಿಷ್ಯವಿಲ್ಲವೆಂದು ಪ್ರೇಮ ನನ್ನ ಬಿಟ್ಟು ಹೋಗಲು ಸಿದ್ಧವಿರಲಿಲ್ಲ. ಅದೆಂತಹ ಹಠಮಾರಿ!
                  ನನ್ನಲ್ಲಿ ಜನಿಸಿದ ಈ ಎಲ್ಲ ಶಿಕಾಯತುಗಳ ಪಟ್ಟಿ ಮಾಡಿದರೆ,ಜಗತ್ತಿನ ಪ್ರೇಮಿಗಳೆಲ್ಲರ ಕನಸಾದ ಚಂದಿರನಲ್ಲಿಗೆ ಹೋಗಿ ತಲುಪಬಹುದು.ಅದೇನೋ ಈ ಶಿಕಾಯಾತುಗಳ ಸುಟ್ಟು ಬಿಡಬೇಕೆಂದಿರುವೆ.ಆದರೆ ನನ್ನ ಆಸೆ ,ಆಕಾಂಕ್ಷೆ ,ನೋವು , ಹತಾಶೆಗಳ ಸುಟ್ಟು ಬಿಟ್ಟೆನಲ್ಲ  ಎಂಬ ಇನ್ನೊಂದು ನವಜಾತ ಶಿಕಾಯಾತು ನನ್ನಿಂದ ಟಿಸಿಲೊಡೆಯುತ್ತದೆ.ಒಟ್ಟಿನಲ್ಲಿ ಎಂದೂ ಮೂಗಿಯದೀ ಶಿಕಾಯತು!!

Comments

Popular posts from this blog

ಇಷ್ಟಪಡೋದಾ?? ಇಷ್ಟವಾಗೋದಾ?

ಮಬ್ಬು

ಆಂತರ್ಯ