ಲೇವಡಿ 🍁
ಎದುರೀಜಿದ್ದೆಲ್ಲ ಪ್ರವಾಹಗಳ.ಯಾವುದು ನೇರ , ಸುಲಭ ಎಂದೆನಿಸೊಲ್ಲ.ಎಲ್ಲವೂ ಹಳಸದ್ದು.ತಿರುವು ಬಯಸದವರ ಬಾಳಿಗೆ ದೂರದಿಂದಲೂ ಸಹ್ಯವಲ್ಲ.ಮುಂದಿನ ನಡೆ ಎಂದರೆ ಅದು ಲೇವಡಿ.ಈ ಬದುಕಿನ ಲೇವಡಿ.ಜಗದ ಲೇವಡಿ.
ಲೇವಡಿಗೆ ತುತ್ತಾಗುವ ಹಂತಕ್ಕೆ ಬಂದು ಮುಟ್ಟಿತಾ ಮಾನವನ ಬದುಕು?ಬಹು ಅಪರೂಪವಾದದ್ದಂತೆ ಮನುಜ ಜನ್ಮ ಪಡೆಯುವ ಜೀವ.ಅಷ್ಟೊಂದು ಪುಣ್ಯದ ಕೊಡಪಾನ(?) ತುಂಬಿರಬೇಕಂತೆ.ಇಲ್ಲೂ ಲೇವಡಿ.ಅಷ್ಟಕ್ಕೂ ಸ್ಥೂಲವಾಗಿ ಪಕ್ಷಿನೋಟಕ್ಕೆ ಕಂಡದ್ದು ಬದುಕೇ ಒಂದು ಮೋಡವಿಲ್ಲದ ಬಾನಿನಂತೆ. ಮೋಡಗಳೇ ಇಲ್ಲದೆ ಪರಿ ತ್ಯಕ್ತ ಅಂತಲೋ ಅಥವಾ ಮೋಡಕ್ಕೆ ತನ್ನಂಗಳವ ಬಿಟ್ಟುಕೊಟ್ಟು ಅಸ್ತಿತ್ವವಿಲ್ಲದೇ ಎಲ್ಲಿಗೂ ಸಲ್ಲದ್ದು ಎಂದು ಹೇಳಬಹುದೇ?ಎರಡೂ ಸತ್ಯ.ಎರಡೂ ಸುಳ್ಳು.ಈ ದ್ವಂದ್ವ,ಲೇವಡಿಗಳ ಗುರು,ಗುರಿ ಎರಡೂ ಬದುಕೇ.ಮತ್ತೆ ಬೇರಾರಲ್ಲ.
ಎಲ್ಲವೂ ಕ್ಷುದ್ರ ಚಿಂತನೆ.ದುಃಖದ ಮಡುವಲ್ಲಿ,ಋಣಾತ್ಮಕವಾಗಿ, ವೇದನಾತ್ಮಕ ಯೋಚನೆಗಳಲ್ಲೇ ಬದುಕುತ್ತಿರುವ ನಮಗೆ ಸುಸ್ತು ಎಂಬುದು ಆಗುವುದಿಲ್ಲವೇ?ಅಥವಾ ಇದೇ ವಾಸ್ತವ ಎಂದು ಒಪ್ಪಕೊಂಡಿದ್ದಾಗಿದೆಯೇ?ತೀಕ್ಷ್ಣ ಭಾವನೆಗಳ ಬಾಣಕ್ಕೆ ತುತ್ತಾಗುತ್ತಾ ಇದ್ದೀವಿ.ಅಷ್ಟೊಂದು ಅಮರತ್ವವೇ?ಅಷ್ಟೊಂದು ಅಧೀರತೆಯೇ?ಕಾಣದ ಬಾಳಿನ ಸತ್ಯವ ಹುಡುಕಿ ಹೊರತೆಗೆಯುವುದ ಮರೆತೇ ಬಿಟ್ಟೆವ?ಎಲ್ಲರೂ ಇಂದು ಕಾಲಜ್ಞಾನಿ ಎಂಬಂತೆ ಮಾತಿನ ಹಿಂದೆ ಪೊಳ್ಳು ಅಹಂಕಾರವ ಪೋಷಿಸುತ್ತ,ಮೋಸ ಎಸಗುತ್ತಿದ್ದೇವಾ?
ಒಮ್ಮೊಮ್ಮೆ ಹುಚ್ಚು ಮನಸ್ಸಿಗೆ ಪರಿಧಿಯ ಅರಿವಿಲ್ಲದೇ ಹೀಗೂ ಅಂದುಕೊಳ್ಳುತ್ತದೆ.ಬಾಳೊಂದು ಜೇನುಹನಿಯಂತಾಗಿದ್ದರೆ ಏನು ಚೆನ್ನವೆಂದು! ಕಷ್ಟ ಎಂಬ ಕಹಿಯೇ ಇರುತ್ತಿರಲಿಲ್ಲ.ಆದರೆ ಸತ್ಯ ಕನಿಕರಹೀನ. ಗೋಚರಗೊಳ್ಳುತ್ತಲ್ಲೇ ಇರುತ್ತದೆ.ಯಾವುದರ ಆಸರೆ ಇಲ್ಲದೆ, ಸುಡುಬಿಸಿಲಲ್ಲೂ ಅಪ್ಯಾಯಮಾನವಾಗಿ ಹೊಳೆಯುತ್ತಲ್ಲೆ ಇರುತ್ತದೆ.
ಬದುಕಿನ ವಿಡಂಬನೆ ನೋಡಿ ಸಂಕಟವಾಗುತ್ತದೆ.ಬದುಕೇ ಬದುಕಿಗೆ ಅಂಟಿಕೊಂಡ ಶಾಪವೇ?ಪ್ರಾಯಶಃ ಕಂಡುಕೊಂಡದ್ದೇನಂದರೆ,ಬದುಕು ಬದುಕಿನ ತರ ಸಾಗಬೇಕೆಂದರೆ, ದುಃಖ ದುಃಖದ ತರವೇ ಇರಬೇಕು.ಕುರುಡು ನಂಬಿಕೆಗಳು ಬುಡವೂರಿದ ಕುರುಹುಗಳು.ಇವು ಗೋಚರಗೊಳ್ಳುವುದು ಪಕ್ಷ ಬದಲಾಯಿಸುವ ಚಂಚಲ ಚಂದಿರನಲ್ಲಿ.
ಬದುಕನ್ನು ಬಾಡಿಗೆಗೆ ಬಿಟ್ಟೆವಾ?ಪಲಾಯಾನವಾದ ಜೀತದಾಳುಗಳಾಗಿದ್ದೇವೆ.ಎಲ್ಲೆಲ್ಲೂ ದ್ರೋಹವೆ ಜಗಮಗಿಸುತ್ತಿದೆ.ಸುಖದ ಜಾಡು ಹಿಡಿದು ಹೊರಟವಗೆ ಹತಾಶೆಯ ವಿಶಾಲ ಬಯಲ ಉಡುಗೊರೆಯನ್ನಿತ್ತರಂತೆ.ಜೀವನ ಏನಂತೆ? ಕಥೆಕಥೆಯಾಗಿ ಅಂಗಳದಲ್ಲಿ ಕುಣಿದಾಡುತ್ತಿವೆ. ಮೆತ್ತನೆ ಹಾಸಿಗೆಯೂ ಋಣದ ಕಲ್ಲು ಮಂಚವೆಂಬಂತೆ ಕಥೆಗಳು ನಮ್ಮನ್ನು ಒಳ ಹೊಕ್ಕಿವೆ.
ಜೀವನದಲ್ಲಿ ದುರಂತಗಳು ಸಹಜ.ಅಪೇಕ್ಷಣೀಯ.ಆದರೆ ಜೀವನವೇ ದುರಂತವಾಗಿ ಹೋದರೆ? ಪ್ರಪಾತದ ತಳಹದಿಯಲ್ಲಿ ಕಚ್ಚಿಕೊಂಡು ಬಿಡದಂತಿದೆ ಈ ಜಂಜಾಟಗಳು. ಸ್ಥಿಮಿತ ತಪ್ಪಿದ ಸ್ಥಿತಿ.ಅದರಿಂದ ಜೀವನ ಹಗುರಾಗಿ ಬೆಲೆ ಇಲ್ಲದೇ ನಲಗುತ್ತಿದೆ.ಹಿಡಿಶಾಪ ಹಾಕಲು ಕಾರಣ ಕೂಡವಿಲ್ಲದ ಖಾಲಿತನ.ಇಂದು ಎಂಬುದು ನಿನ್ನೆಯ ತಪ್ಪಿನ ಸಂಕೇತ. ಉದಾಹರಣೆಗೋಸ್ಕರ ಜೀವನ ಸವೆಸಬೇಕೆನ್ನುತ್ತದೆ ಬಾಳ ಸಂವಿಧಾನ !ಆದರೆ ಎಲ್ಲವ ಹಿಮ್ಮೆಟ್ಟಬೇಕು ಎಂಬ ಸಣ್ಣ ಸೂಚನೆಯ ಕೊಡದೆ.ಕೊರಗು ಎಂಬುದು ಜಾನಪದದೊಳಗೆ ಒಂದಾಗಿ ನರನಾಡಿಯಲ್ಲಿ ಹರಿಯುತ್ತಿದೆ. ವೈಚಾರಿಕತೆಯನ್ನರಿಯಲು ಜೀವನದ ಹರಿವನ್ನೇ ಬದಲಾಯಿಸಬೇಕೆಂದು ಬಿನ್ನಹ ಮಾಡಿಕೊಂಡೇವೇ?
ಜೀವಿಸುವ ಆಸೆ ಉಲ್ಬಣಗೊಳ್ಳಬೇಕಿದೆ. ಮನುಜರಾಶಿಯ ದುಃಖ ದುಗುಡಗಳೆಲ್ಲವ ಆಯಸ್ಕಾಂತೀಯ ಕ್ಷೇತ್ರಗಳಿಂದ ಕಿತ್ತು ಹೊರ ತೆಗೆಯಬೇಕಿದೆ.ಬದುಕ ಬಂಡಿಯ ಚಲನೆಯ ನೋಡಿ ದಿಗ್ಮೂಢರಾಗದೆ ಅದರ ತತ್ವವ ಅರಿಯಬೇಕು.ಇಲ್ಲವಾದಲ್ಲಿ ಏನೂ ಅರಿಯದ ಹಾಗೆ, ಅಕ್ಷೋಹಿಣಿ ಶ್ರೀ ಸಾಮಾನ್ಯರಂತೆ ಮುಂದಿನ ಜಾಗಕ್ಕೆ ಹೋಗಿ ತಲುಪಬೇಕು.ಚಿಂತಿಸಿದಷ್ಟು ಚಿತೆ ಹೆಚ್ಚು ಹತ್ತಿ,ವಿಚಿತ್ರ ಶಾಖ ಸೂಸಿ ಬೇಯಿಸುವ ಈ ಬದುಕು.ನೋಡಿದರೆ ಕೊನೆಯೇ ಇಲ್ಲದ ಸುರಂಗ.ದೃಷ್ಟಿ ಭ್ರಮೆಗಳು ಸಾಮಾನ್ಯ.ಜೀವನ ನಡೆಸಬೇಕು,ದುಃಖಗಳ ಅನುಭವಿಸಬೇಕು,ದುಗುಡ ದುಮ್ಮಾನಗಳ ಜೀರ್ಣಿಸಿಕೊಂಡು ದುರಂತಗಳಿಗೆ ಸಾಕ್ಷಿಯಾಗುತ್ತಲೇ ಇರಬೇಕು.
ಬೇರೆಯವರ ಬಾಳನ್ನು ಅನುಕರಿಸಿ ಅನುಭವಿಸ ಹೊರಟರೆ,ಅನುಕಂಪದ ಹೊರತು ಸಿಗುವುದೆಲ್ಲ ಮಣ್ಣು.ತೀವ್ರ ತಳಮಳ, ವಿಷಾದವೆಂಬ ಹೊಗೆಯನ್ನು ಹೊಕ್ಕಿ ಅದೃಶ್ಯವಾಗಿ ಸೋತು ಬಿಡುತ್ತೇವೆ. ಭಾವನೆಗಳು ಜೀವ ಕಳೆದುಕೊಂಡಂತೆ ನಾರುತ್ತಿವೆ.ಮುಂದೆ??ಉತ್ತರ ಕೇವಲ ಲೇವಡಿ.ನಮ್ಮಯ,ನಿಮ್ಮಯ ಜೀವನದ ಲೇವಡಿ🙃

Comments
Post a Comment