ಆಪೋಷಣಕ್ಕೊಂದು ಆಹ್ವಾನವಿತ್ತರೆ!

                         ಈ ಲೇಖನ ಭಾವನೆಗಳ ಸಂಕಲನ. ಕಷ್ಟವೆನಿಸಿದರೂ ಅಪ್ಪಿಕೊಂಡಿರುವೆ. ತುಡಿತಗಳಿಗೆ ಸ್ಪಂದನವಾದರೂ ಆಗಲೆಂದು.ಅದೇ ಲಗ್ನದಲ್ಲಿ  ನಿಸ್ತೇಜ ಹೃದಯಕ್ಕೆ ತುಮುಲಗಳ ಸೈನ್ಯದ ಆಗಮನ ಬೇರೆ.ಯೋಚನಾಶಕ್ತಿಯ ಅಪೋಷಣವೆಂದರೆ ಇದೇ ತಾನೇ?
                    ದಕ್ಕುವುದಕ್ಕಿಂತ ಮುಂಚೆಯೇ ಹೊಳೆದು ಹೊಳೆದು ಕಣ್ಣುಕುಕ್ಕಿ ದೃಷ್ಟಿಯನ್ನೂ,ಬುದ್ಧಿಯನ್ನು ಆಪೋಷಣದ ತೆಕ್ಕೆಗೆ ಬರಮಾಡುವ ಆಸೆ.ದಕ್ಕಿದ ನಂತರ ಏಕಾತಾನತೆ ಸಂಪ್ರಾಂಪ್ತಿಯಾಗಿ ತುಕ್ಕು ಹಿಡಿದು ಜಂಘಾಬಲವಡಗಿಸಿ ಎಲ್ಲವ ಆಪೋಷಣದ ತೆಕ್ಕೆಗೆ ದೂಡುವ ದ್ವಂದ್ವ ಮನಸ್ಸು.
                      ಇಷ್ಟೆಲ್ಲ ಅರ್ಥ ಆಗೋ ವಿದ್ವತ್ತು ಇರಬಾರದು. ಎಲ್ಲೆಲ್ಲೋ ಒಯ್ದು ಬಿಡುತ್ತೆ,ಹಾಗೆ ತೂರಿಕೊಂಡು ಹೋದ ನಕಲಿ ಜಗತ್ತಿನಲ್ಲಿ ಅಸಲಿಯ ಮೂಲವಾದರೂ ಎಲ್ಲಿ? ಸುಳ್ಳನ್ನು ಕೂಡ ಸೃಷ್ಟಿಸಿದ ದಾಖಲೆಗಳು ಎಷ್ಟಿಲ್ಲ?ಅನುಭವಕ್ಕೂ ನಿಲುಕದೇ ಇರೋದು ಅನಂತ.ಆದರೆ ಅನುಭವಿಸಿಯೇ ಬಿಡಬೇಕು ಅನ್ನೋ ತುಮುಲ. ನಿರ್ವಾತದಲ್ಲೂ ನೆನಪು ನೂರೆಂಟು.ಕೆಲವೊಂದು ನಿನ್ನದು,ಆದರೂ ನೀನಿರದ ನನ್ನವು.ನೀನಿದ್ದ ನಿನ್ನೆಗಳು ಅಥವಾ ನೀನು ಇರದ ನಾಳೆಗಳು..ಎಲ್ಲವೂ ಇಂದೇಕೋ ಅಪರಿಚಿತವೆನ್ನಿಸುತ್ತಿದೆ.
                ನಿನ್ನೆಯ ನೆನಪುಗಳು ಏನನ್ನೂ ಹೊತ್ತು ತರುತ್ತಿಲ್ಲ.ಅಷ್ಟಕ್ಕೂ ನಿನ್ನೆಗಳು ನಗಣ್ಯ.ನೆನಪುಗಳು ನೋವಿನ ತಂತಿಗಳ ಮೀಟಿಯೇ ತೀರಬೇಕು ಎಂದೇನಿಲ್ಲ.ನೆನಪುಗಳು ಮೂರನೆಯ ವ್ಯಕ್ತಿಯನ್ನು ಸೋಕಿ ಮರೆಯಾಗುವ ತಂಗಾಳಿ ಕೂಡ ಆಗ ಬಹುದಲ್ಲವೆ?ಇವೆಲ್ಲ ನಿನ್ನೆಯಲ್ಲಿ ನವಿರೇಳಿಸುತ್ತಿದ್ದ ನನ್ನನ್ನು,ಇಂದಿನ ನಾನು ಹಾಗೂ ನನ್ನದೆಂಬುವುದನ್ನ ಆಪೋಷಣವಿತ್ತಂತೆ ಅಲ್ಲವೇ?
              ಮನಸ್ಸು ಮುನಿಸಿ ಮಸಣ ಸೇರೀತೇ?ಅತಿಯಾದ ಹಠ ಅಥವಾ ಅತಿಯಾದ ತಾತ್ಸಾರಕ್ಕೆ ತುತ್ತಾಗಿ ಆಪೋಷಣವೆಂಬ ನರಕಕ್ಕೆ ಒಂದೊಂದೇ ಹೆಜ್ಜೆ ಮುಂದಿಡುತ್ತಿದ್ದೇವೆ.ಎಲ್ಲವ ಪ್ರೀತಿಸುತ್ತೇವೆ.ನೋವನ್ನೂ ಅನುಭವಿಸುತ್ತೇವೆ. ಹತಾಶೆಯಲ್ಲೂ ಹೂವರಳಸಿ  ಹೋಗುತ್ತೇವೆ.ಹೇಳಬೇಕೆಂದರೆ ಎಲ್ಲರೂ ಹೋಗುತ್ತಾರೆ,ಅಂತ್ಯ ಕಾಣದೆ!!ಈ ನಿಯಮ ಖಾ ಲಿತನವನ್ನು ಕೂಡ ಖಾಲಿ ಮಾಡಿಸುತ್ತದೆ.ಮತ್ತೆ ನನ್ನ ನಾನು ಪ್ರೀತಿಸದೇ,ನಿನ್ನ ಪ್ರೀತಿಸಿ ಸ್ವಯಂ ಆಪೋಷಣಕ್ಕೆ ಸಿದ್ಧವಾಗುತ್ತೇನೆ!
                ಅಷ್ಟಕ್ಕೂ ಆಪೋಷಣವನ್ನು ತೆರೆದ ಬಾಹುಗಳಿಂದ ಬಾಚಿ ತಬ್ಬಿ,ಬಂಧನದ ಬಿಸಿಯಪ್ಪುಗೆಯ ಬೆಚ್ಚನೆಯ ಕಾವು ನೀಡಲು ಆಹ್ವಾನವಿತ್ತವರು ನಾವೇ,ಬೆಪ್ಪುಗಳು.ನಾವೇ ದುರಂತಗಳ ಕಾದು ಕಾದು ಬರ ಮಾಡುತ್ತೇವೆ.ತಪ್ಪೆಂದು ಗೊತ್ತಿದ್ದರೂ!!ಗಾದೆ ಬೇರೆ,ವೇದ ಬೇರೆ. ಜ್ಞಾನ ಬೇರೆ,ಬದುಕು ಬೇರೆ.ಪ್ರೀತಿಸು ಎಂದು ಬರೆದರೆ ಓಡಿಬಂದು ಎದೆಗೂಡಲ್ಲಿ ಅಡಗೋ ಕಾಲ ಹಿಂದಿನ ಪುಟದ್ದು.ಆದರೂ ಪ್ರೆಮಕವಿಗಳಿಗೆ ಬರವೇ?ಬರೆದು ಬರೆದು ಹೃದಯದ ಮೇಲೆ ಬರೆ ಎಳೆದುಕೊಳ್ಳುತ್ತಾರೆ!ಇವರನ್ನೆಲ್ಲ ಆಪೋಷಣದ ತೆಕ್ಕೆಗೆ ನೂಕಿ ಪ್ರೀತಿಸು ಎಂದು ಪೀಡಿಸೋರ್ ಯಾರೋ?
                ಇನ್ನೂ ನೋಡಬೇಕು,ಅನುಭವಿಸಬೇಕು ಅನ್ನೋ ಚಪಲ. ವಿಶ್ರಾಂತಿಯಿಲ್ಲದೇ ಕಾಡುವ ನೆನಪು.ಭ್ರಮೆ!!ಖುಷಿ ಎಂಬೋದು ಅವಶೇಷವಾಗಿದೆ.ಎಲ್ಲರಿಗೂ ಪ್ರೀತಿಸಲ್ಪಡಬೇಕು ಅನಿಸುತ್ತೆ.ಹಾಗಂತ ಪ್ರೀತಿಸಿ ಬಿಡಬೇಕಾ?ಭಾವನಹರಣ ಪ್ರೀತಿ.ಪ್ರತಿಯೋರ್ವರ ಹೃದಯದ ಮೇಲೆ ನೋವಿನ ಕುರುಹು ಇರದೇ ಹೋಗಿದೆಯೇ? ಕಾರ್ಪಣ್ಯ - ಕಾರುಣ್ಯ - ಕೃತಜ್ಞತೆಗಳ ಮಧ್ಯವೇ ಹೃದಯದ ಅಸ್ತಿತ್ವ.
                       ಕೆಟ್ಟ ಕನಸೂ ಕೂಡ ಒಂದು ಹದಕ್ಕೆ ಚಂದ.ಯಾಕೆಂದರೆ ಅದು ವಾಸ್ತವವಲ್ಲ.ಅದೊಂದು ಭಾವನೆಗಳ ಗುಚ್ಚದ ಸಮೀಕ್ಷೆ.ಆ ಕನಸು ರಾತ್ರಿನೂ ಕತ್ತಲಾಗದೇ ಬೆಳಕು ನೋಡೋ ಜನರ ಕಣ್ಣಿಗೆ ಹಗಲಲ್ಲಿ ಅವರ ಹೃದಯದಲ್ಲೂ ಕತ್ತಲಾವರಿಸಲಿ ಅಂತ ಯಾರೋ ಕೊಟ್ಟ ಶಾಪ ಅನಿಸುತ್ತೆ.ಬರೆದಷ್ಟು ಮುಗಿಯದ ಅತೃಪ್ತಿ.ಕಾಣದ ಸುಖದ ಅಪೇಕ್ಷೆ.ಇದೆಲ್ಲ ಅತಿಮಾನುಷ ಕತೆಯ ಅರಾಜಕತೆ ಎಂದೆನಿಸುತ್ತದೆಯೇ?ಬದುಕುವುದೇ ಗೆದ್ದ ಹಾಗೆಯೇ? ಇವೆಲ್ಲವೂ ಬದುಕಿನ  ಆಪೋಷಣವಲ್ಲದೇ ಇನ್ನೇನು?

Comments

Popular posts from this blog

ಇಷ್ಟಪಡೋದಾ?? ಇಷ್ಟವಾಗೋದಾ?

ಮಬ್ಬು

ಆಂತರ್ಯ