ಆಂತರ್ಯ
ಒಳ್ಳೆ ಪ್ರೇಮಿಗಳು ಸಿಗೋದು ಕಷ್ಟ.ಅವರ ಮೇಲೆ ಕತೆ ಬರೆದರೆ ಜನ ಅದನ್ನ ಓದುತ್ತಾರ?ದಂತಕತೆ ಅಂತ ಅನಿಸುತ್ತಾ?ಈ ತರಹದ ಪ್ರೇಮಿಯ ಪ್ರೇಮ ಪತ್ರ ಓದಿ ಕಣ್ಣಾಲಿಗಳು ಒದ್ದೆ ಆಗುತ್ತಾ? ನನ್ನದೇನೋ ಎಂಬ ಭಾವ ಬೆಳೆಯುತ್ತಾ? ಇಂತಹ ಪ್ರೀತಿಗೆ ಬೆಲೆ, ಆಕಾರವಿಲ್ಲದಿದ್ದರೆ ಇನ್ನು ಕಾಡ್ಗಿಚ್ಚಿನಂತೆ ಅಣು ಅಣುವಿಗೂ ಹರಡಿರುವ ವಿರಹಕ್ಕುಂಟೆ?
ವಿರಹದಲ್ಲಿ ನೆನಪು ದುಃಖವನ್ನು ಉಮ್ಮಳಿಸಿ ತರದಿದ್ದರೆ,ಎದೆಯ ಬಯಲಿನಲ್ಲಿ ತೇಲಿಬಂದ ಪ್ರೀತಿ ಗಾಳಿ ಮಿತ್ಯವೇ?ಪ್ರೀತಿ ಎಷ್ಟು ತಂಪು ಅನಿಸಿತ್ತೋ,ವಿರಹ ಯಾಕೆ ಇನ್ನೂ ತೀವ್ರವಾಗಿ ಕಿತ್ತು ತಿನ್ನುತ್ತಿಲ್ಲ?ಪ್ರೀತಿ ಮಾಸಿದ ಮೇಲೆ ಕಲೆಯೇ ಇಲ್ಲವೆಂದರೆ,ಒಂದು ಕಾಲದ ಅಸ್ತಿತ್ವ ಸುಳ್ಳೇ?
ಬದುಕ ಸವೆಸಲು ಪ್ರತಿಕ್ಷಣದ ಸಾಕ್ಷಿ ಬೇಕೇ?
ಇಲ್ಲವಾದ ಪ್ರೀತಿ ಅನುಕ್ಷಣ ಸಾಕ್ಷಿ ಬೇಡಿತ್ತು!ಪ್ರೀತಿಯ ಧಿಕ್ಕರಿಸಿದವರು ಶಕ್ತಿಶಾಲಿ ಆಗ್ತಾರಾ?ಅಥವಾ ಗೊಡ್ಡು ತೋರ್ಪಡಿಕೆಯ ಪರಮಾವಧಿಯಾ?ಹಳೆ ನೆನಪುಗಳು ಸಮುದ್ರದ ಅಲೆಯ ತರ ವಿರಾಮವಿಲ್ಲದೇ ಬಂದಪ್ಪಳಿಸುತ್ತಲೇ ಇರಬೇಕಾ?ಬರದೇ ಇದ್ದರೆ?
ಪ್ರೀತಿ ಅಂಗಡೀಲಿ ಕೊಂಡುಕೊಳ್ಳೋ ವಸ್ತು.ಹೌದು.ಬೇರೆ ಅವರ ಸ್ವತ್ತನ್ನ ಅಪೇಕ್ಷಿಸೋದು.ಕಾಲಾನಂತರ ಮೋಹದ ಸರಪಳಿ ಕಳಚಿದ ಮೇಲೆ ಅನುಕಂಪ ಅನುರಾಗ ಕಡಿಮೆ ಆಗೋದು.ಆದರೆ ಬೆಲೆ ತೆತ್ತದ್ದು ನಾವೇ!!ಕಟ್ಟಿದ ಬೆಲೆ ಯಾವಾಗಲೂ ಕಾಡುತ ಇದ್ದರೆ ಮನುಷ್ಯ ತುಂಬ ವ್ಯಾವಹಾರಿಕ ಅನಿಸೋದು ಸ್ವಾಭಾವಿಕ ಅಲ್ವಾ?ಆದರೆ ಪ್ರೀತಿ ನಿಸ್ವಾರ್ಥ ಅನ್ನುತ್ತೆ ಜಗತ್ತು.ಬೆಲೆ ಕಟ್ಟಿದ್ದನ್ನು ಅಪೇಕ್ಷಿಸದೇ ಸ್ವಾರ್ಥಿ ಎಂದು ಹೇಳೋದು ಅದೇ ಜಗತ್ತು.ಆದರೆ ಬೆಲೇನೂ ಕಟ್ಟಿದೀನಿ. ಏನನ್ನೂ ಆಶಿಸುತ್ತಿಲ್ಲ.ಮೋಹವಿಲ್ಲ, ತಾಪವಿಲ್ಲ.ಪ್ರೀತಿ ಇಲ್ಲ ಎಂದೆನಿಸುತ್ತಾ?ಅಂದಮೇಲೆ ಪ್ರೀತಿ ಪ್ರೀತಿನೇ ಆಗಿರಲಿಲ್ಲವಾ?
ಪ್ರೀತಿ ಒಂದು ಭಾವ ಆಗಿರಬೇಕು.ಎಷ್ಟು ಅಂದರೆ,ಸಂಗೀತದ ತಪ್ಪು ಸ್ವರ ಕೂಡ ಎದೆಗೂಡಲ್ಲಿ ಮಾರ್ದನಿಸುವಂತೆ ಅದು ಮಾರ್ದನಿಸಬೇಕು. ಪ್ರಯತ್ನಪೂರ್ವಕವಾಗಲ್ಲ,ಭಾವಪೂರ್ವಕವಾಗಿ.ಮೈಮರೆಯಬೇಕು, ಆಕಾರವಿಲ್ಲದ ಪ್ರೀತಿಯ ಆಕಾರ ಇರೋ ದೇಹದರೂಪದಲ್ಲಿ ಎತ್ತಿ ಮೆರೆಸಬೇಕು! ಹಾಗೇ ದೊಪ್ಪೆಂದು ಕೆಳಗೆ ಬೀಳಿಸಲೇ ಬೇಕು.ಪ್ರೀತಿ ಕಣ್ಣಿಗೆ ಕಾಣೋಲ್ಲ ಅಂತ ಗೀಚಿದ್ದೆಲ್ಲ ಪ್ರೇಮ ಆಗೋಲ್ಲ.ಹಾಗಾದರೆ ಪ್ರೀತಿ ಪ್ರೀತಿ ಅನಿಸೋಕೆ ಮಾನದಂಡವೇನು? ಹಾಗಾದರೆ,ಅನಿಯಮಿತ ಅಪರಿಮಿತ ಪ್ರೀತಿ ಸೂಸುತ್ತೀವಿ ಎಂಬ ಭ್ರಮೆಯಲ್ಲಿರುವ ಪ್ರೇಮಿಗಳ ಪಾಡೇನು?ಎಲ್ಲೆಯಿಲ್ಲದ್ದು ಪ್ರೇಮವಂತೆ.ಹಾಗಿದ್ದ ಮೇಲೆ ಕಣ್ಣಿಗೆ ಕಾಣದ್ದು ಭ್ರಮೆಯಲ್ಲವೆ?
ಒಳಗಡೆ ಭೀಪ್ಸೆ ಇದ್ದರೆ ಮಾತ್ರ,ಪ್ರೀತಿ ಉಗಿಬಂಡಿ ಓಡ್ತಾ ಇರೋತ್ತಾ.ಅದು ಆರಿ ಹೋದ ಮೇಲೆ,ಪ್ರೀತಿ ಉಳಿಲೇ ಬೇಕಾ?ಪ್ರೀತಿ ಒಂದು ಗುಮಾನಿ.ಉತ್ತರ ಇಲ್ಲ,ಸಿಕ್ಕಿದ ಉತ್ತರ ಸಲ್ಲ.ಉತ್ತರ ಇಲ್ಲದ ಪ್ರಶ್ನೆ ಪ್ರೀತಿ ಇಲ್ಲದ ಹೃದಯದ ತರ! ನಿರ್ವಾತ ತುಂಬಿ ತುಳುಕುತ್ತೆ.
ಏಕಾಗ್ರಿಯಾಗಿ ಪ್ರೀತಿ ಒಂದೇ ಮಾಡಿದೋರಿಗೆ,ಬದುಕಿನ ಬೇರೆ ವಿಷಯಗಳು ಹೇಗೆ ಗೊತ್ತಾಗಬೇಕು?ಪ್ರೀತಿ ಮಾಡ್ತಾ ಇದೀವಿ ಅಂದರೆ ಬೇರೆ ಅವರ ಹೃದಯ ನಮ್ಮ ಬಳಿ ಇದೆಯೆಂದು ಭ್ರಮೆಯಲ್ಲಿ ದ್ವಾರಪಾಲಕರ ಕೆಲಸ ಮಾಡೋದು..ಆದರೆ ಪ್ರೀತಿನೇ ಮನೆ ಬಿಟ್ಟು ಹೋದಮೇಲೆ ಏನನ್ನು ಭದ್ರ ಮಾಡಿ ಏನು ಪ್ರಯೋಜನ?ಪ್ರೀತಿ ಮುನಿಸಿಕೊಂಡು ಹೋದಾಗ ವಿರಹಕೊಳ್ಪಡಬೇಕು...ಏಕೆಂದರೆ ಋಣ..ಪ್ರೀತಿಯ ಋಣ...ಋಣಮುಕ್ತ ಜೀವನ ಕಷ್ಟ ಜೊತೆಯಲ್ಲಿ ಪಾಪಿ ಹೃದಯವ ಇಟ್ಕೊಂಡು ..
ಹಿಂಸೆ ಕಂಡರೆ ಹೌಹಾರೋ ಮಾನವತಾವಾದಿಗಳು ಲೆಕ್ಕದ ಪ್ರಕಾರ ಪ್ರೀತಿಸ ಬಾರದು.ಯಾಕೆಂದರೆ ಹಿಂಸೆ ಇರದ ಪ್ರೀತಿಯೇ ಇಲ್ಲ.ಈ ತಾತ್ಪರ್ಯ ಯಾಕೆಂದರೆ,ಹೃದಯ ಯಾವಾಗಲೂ ನೆನಪಿಸಿಕೊಳ್ಳೋದ ಗಾಯನೇ ಹೊರತು, ತೇಪೇನ ಅಲ್ಲ.ಆದರೂ ಸುಲಲಿತ ಸಮಗ್ರ ಪ್ರೀತಿನ ಮೀನಿಗೆ ಕಾದ ಬಕಪಕ್ಷಿಯಂತೆ ಕಾಯುತ್ತ ಕುಳಿತವನಿಗೆ ಹಿಂಸೆನೇ ಇರದ ಪ್ರೀತಿ ಇಲ್ಲ,ಇದ್ದರೂ ನೆನಪಲ್ಲಿ ಉಳಿಯೋಲ್ಲ ಅಂತ ಪ್ರತಿಪಾದಿಸುವುವು ದಾದರೂ ಹೇಗೆ?
ಇದು ಆಳವಾಗಿ ತಳವೂರಿ ನಿಂತ ರೋದನೆ.ತೀಕ್ಷ್ಣ ಭಾವನೆಗಳನ್ನು, ಎಷ್ಟೋ ಬಲಿಗಳನ್ನು ಅಪೇಕ್ಷಿಸುತ್ತದೆ.ಪ್ರೀತಿ ಮೊಳಕೆಯೊಡೆಯುವ ಸಾಧ್ಯತೆಗಳಿದ್ದರೂ, ಪರಿಸ್ಥಿತಿ ಅನನುಕೂಲಕರವಾಗಿರುತ್ತೆ.ಹುಚ್ಚರು ಎಲ್ಲವ ಬದಿಗಿಟ್ಟು ಹೊರಟು ಬಿಡುತ್ತಾರೆ, ಎದೆಗೂಡ ಬಗೆದು ಕೊಳ್ಳಲು!ಒಳ್ಳೆ ಕಿವುದರ ಊರಲ್ಲಿ ಕಿನ್ನರಿ ಬಾರಿಸಿದ ಹಾಗೆ!!
ತಿಪ್ಪೆಯಿಂದ ಸೂಸುವ ಸುಪ್ತ ಸುಖ ಈ ಪ್ರೀತಿ.ಕಸದಲ್ಲೂ ಕನಸ ಬೆನ್ನಟ್ಟಿ ಹೊರಡೋ ಯಾನ..ಈ ಒಗಟನರಿತವರು,ಅರಿಯದೇ ಇರುವರು ಎಲ್ಲರೂ ಶಿಕಾರಿಗಳೇ..ಹೃದಯ ಬೇಡೋ ತುಸು ನಿರಾಳತೆಯ ಬದಿಗೊತ್ತಿ ದುಃಖದ ಬಯಲಿಗೆ ಓಡೋ ಸಂಚಯ. ಉಮ್ಮಳಿಸಿ ಬರುವ ಖಾಲಿತನವ ತಡೆಯಲು ಯಾವ ಉಕ್ಕಿನ ತಂತಿಯ ಹುಡುಕ ಬೇಕು?ಕಾಲದ ಕ್ರೌರ್ಯವೋ , ಕಾಣದ ಹುನ್ನಾರವೋ?ಪ್ರೀತಿಯನ್ನು ಸ್ವಂತಿಸಿಕೊಳ್ಳಲು ಆಂತರ್ಯವ ಜೈಲಿಗಟ್ಟಿ ತಮಾಷೆ ನೋಡಲೇಬೇಕು!!
Comments
Post a Comment