ಸಂಚಿಕೆ ♥️
ಭಾವನೆಗಳಿಂದ ಕಟ್ಟಲ್ಪಟ್ಟ ದೇಹವೊಂದು ಪ್ರೀತಿಸಿತಂತೆ,
ಪದೇ ಪದೇ,ಆದರೆ ಮಾತೇ ಆಡಲು ಬರದೆ!
ಎದೆಗೂಡಲ್ಲಿ ಪ್ರವೇಶಕ್ಕೆ ತಡೆಯೊಡ್ಡಿ ಬೇಸರಿಸಿದನಂತೆ,
ಮತ್ತದೇ ರೀತಿಯಲ್ಲಿ, ತುಸುವೂ ಯೋಚಿಸಲು ಬಾರದೇ!!
ಕಣ್ಣಂಚಿನಲ್ಲಿ ನೀರು ಜಿನುಗಿದರೆ ಕಾರಣಗಳ ರತ್ನಗಂಬಳಿ ಹಾಸುವುನಂತೆ,
ಸಂತೈಸಲು ದಿಕ್ಕೆಟ್ಟ ದಾರಿಮರೆತ ಮರಿ ಹಕ್ಕಿಯಂತೆ!
ಕಾಡುವ ಕಂಗಳ ಸ್ಮೃತಿ ಪಟಲದಲ್ಲಿ ಚಿತ್ತಾರಗೈವ ಆಸೆ ಅವನಿಗೂ ಅಂತೆ,
ಆದರೆ ಕುಂಚ ಮರೆತ ಅಂತರ್ಮುಖಿ ಕಲಾವಿದ ಕೈಚೆಲ್ಲಿರಲು!!
ಹೇಳಿದರೆ ಪ್ರೀತಿಯಲ್ಲ ಹೇಳದೆಯೂ ಮೋಹಿಸಬಹುದಂತೆ ಎಂದು ಅರಹುವನು,
ತೀವ್ರಗತಿಯ ಮೋಹದ ಬೂದಿಯ ಮೈಗರಿಚಿಕೊಂಡು!
ಪ್ರೀತಿಯ ಪರಿಭಾಷೆಯೇ ಅವ್ಯಕ್ತವೆಂದು ಮೌನಿಯಾಗುವನಂತೆ,
ಅರ್ಥೈಸಿಕೊಳ್ಳಲಾಗದ ದಡ್ಡಿಗೆ ಹೃದಯವ ಬಳುವಳಿಯನ್ನಿತ್ತು!!
ಹಠವ ಸಾರೋ ಈ ವೇದಾಂತಿಯು ಮನಸೋ ಇಚ್ಛೆ ಪ್ರತಿಪಾದಿಸಿದನಂತೆ ತನ್ನದೇ ಹಾದಿಯಲ್ಲಿ ಪ್ರೇಮವ,
ಬೇರೆಯವರ ಹೃದಯವ ಪಣಕಿಟ್ಟು!!
ಆಹುತಿಯ ಬಲೆಗೆ ಬೀಳಲು ಅರ್ಪಿಸಿದರಂತೆ ಜೀವಶ್ರುತಿಯ ಘಂಟಾಘೋಷವಾಗಿ,
ಮರೆಯಲಾಗದ ಅಧ್ಯಾಯ ಸಂಚಿಕೆಯಾಗಿ ಪ್ರವಹಿಸಲು!!
ಈ ಛಲಗಾರ ಮೌನಿಯ ಮೇಲೆ ಬತ್ತದ ಪ್ರೇಮದ ಸೆಲೆಯಂತೆ
ಪ್ರೀತಿಸಿದ ಹುಡುಗಿಗೆ,ಹೃದಯವ ಸಂಪರ್ಕಕ್ಕೆ ಸಿಗದ ದ್ವೀಪವನ್ನಾಗಿಸಲು!!
ಆತನರಿತು ಎಲ್ಲವನರಿಯುವ ಹೆಬ್ಬಯಕೆಯಂತೆ ಸೋಲನರಿಯದ ಮಬ್ಬಿಗೆ,
ತಿಳಿದೂ ಸಹ ಎಂದಿಗೂ ಪರಿಪೂರ್ಣವಾಗದ ತನ್ನಾಸೆಯ ವಿಶ್ವಕೋಶ ಅವನೆಂದು!!!
Comments
Post a Comment