ಹಸಿಸುಳ್ಳು
1. ಕೆಳದುಟಿಯ ಕಚ್ಚಿ ರಕ್ತ ಕೊಸರುವವರೆಗೂ ಕನವರಿಸುತ್ತಿದ್ದೆ ನಿನ್ನೆಯ ಹೆಸರ
ಅಂದು ಅರಿವಿಗೆ ಬರದ ನೋವು ಇಂದು ತುಟಿಗಳು ನಿಶ್ಚಲವಾಗಿದ್ದರೂ ಅನುಭವಿಸುತ್ತಿವೆ
ಹುಣ್ಣಿಮೆ ಇಂದಾಗಬೇಕು,ಹೇಳು ನನಗೀಗ
ನೀನು ನೋವಾ?ನಿನ್ನ ಇಲ್ಲದಿರುವಿಕೆ ನೋವಾ?
2. ಪ್ರೀತಿಯೆಂಬ ಹೂವನ್ನೀಡಿದಾಗ ಘಮವ ಆಸ್ವಾದಿಸುವುದನ್ನು ಅಧೀನವಾಗಿಸಿಕೊಂಡೆ,
ನಾಳೆಯ ದಿನಕ್ಕೆಂದು ಪಕಳೆ ಪೇರಿಸುವ ಕೈಂಕರ್ಯದ ವಜ್ಜೆಯನ್ನು ಎಳೆದು ಕೊಂಡೆ ಬಡಪಾಯಿ ಹೃದಯದ ಮೇಲೆ..
ಗೊತ್ತಿರಲಿಲ್ಲ ಅನುಭವಿಸದೇ ಬಚಿತ್ತುಕೊಂಡರೆ ಮಾಸುತ್ತದೆ ಪ್ರೀತಿಯೆಂದು!!
ಎದುರಾದಾಗ ಒಂದು ದಿನ,ಜೀವರಹಿತ ಪಕಳೆಗಳ ಚೆಲುವ ಹುಡುಕ ಹೊರಡಲು,
ಅರಿತೆ ನಾ ಅವು ಇಂದು ಕಸವಷ್ಟೇ,ನಿನ್ನೆಯ ನೆನಪ ಹೊತ್ತು ತರುವ ತೇರೆಲ್ಲವೆಂದು!!
3.ನಿನಗಾಗಿ ನೂರು ಸತ್ಯಗಳ ಬಚ್ಚಿಟ್ಟು ಒಂದೇ ಸುಳ್ಳನ್ನು ಎತ್ತಾಡಿಸುವೆ..
ಸುಳ್ಳಿನ ಗುಣಧರ್ಮವೇ ಅದು.. ನೋಯಿಸೊಲ್ಲ
ಆದರೆ ನೀನು ಸುಳ್ಳಲ್ಲ!ನನ್ನ ನೋಯಿಸುವುದು ನಿನ್ನಯ ರೂಢಿ!
ನೀನೆಂಬ ಸತ್ಯಕ್ಕಿಂತ ನಿನ್ನ ಪ್ರೇಮವೆಂಬ ಸುಳ್ಳನ್ನು ಅಪ್ಪಿಕೊಂಡರೆ,
ಜಗತ್ತೆಲ್ಲ ಈ ಆಲಿಂಗನವ ನೋಡಿ ನಗುವುದ್ಯಾಕೆ?
4.ಸುಳ್ಳು ನೆನಪಾಗಿ ಕಾಡಿದ್ರೆ ಸತ್ಯ ವಿಷವಾಗಿ ಆವರಿಸುತ್ತೆ
ನೈವೇದ್ಯಕ್ಕಿರಿಸಿದ ಅಕ್ಷರಗಳೇ ಉರುಳಾಗಿ ಮತ್ತಲ್ಲೇ ಕರೆದೊಯ್ಯುತ್ತಿರಲು!!
ಮೊಂಡು ಮನಸ್ಸು ನಿರಾಕರಿಸುತ್ತಿದೆ ನನ್ನಯ ನಿಲುವುಗಳ..
ಕೈ ಹಿಡಿದು ಎಳೆದುಕೊಂಡು ನಿಲ್ಲಿಸುತ್ತಿದೆ ಕಟಕಟೆಯಲ್ಲಿ!!!
ಏಕಿಷ್ಟು ಕಹಿ ನನ್ನೆಡೆಗೆ ನೀನು?ಅಂದು ವೇದನೆಗೆ ತಳ್ಳಿದೆನೆಂಬ ಹಗೆಯಾ ?
ನಿನ್ನನ್ನೇ ಹಿಂಬಾಲಿಸಿ ಹೋಗಿದ್ದೆ,ನಿನ್ನಯ ಇದೇ ಮೊಂಡು ಹಠಕ್ಕೆ ಮಣಿದು!!
5. ಶೂನ್ಯ ಪರಿಪೂರ್ಣಗಳ ಹರಿವು ಬದಲಿಸಿದ
ಆ ಕುರುಡು ಸಾರಥಿ ಆಡಿದ ಆಟ ಮರೆತಂತೆ,
ಕಾಲ ತನಗಾದ ವಯಸ್ಸ ಮರೆತು ವರಸೆ ಬದಲಿಸಬಹುದೇ?
ಹುರುಪಿನಲಿ ಹಸಿ ಸುಳ್ಳು ಅಕ್ಷರಗಳ ವರೆಸಬಹುದೇ?
ಚೆಂದನೆಯ ಕನಸ ನೋಡಲೊಲ್ಲೆಂದು ನಿದ್ದೆಯ ದೂರಸರಿಸಿ,
ನನಸೆಂಬ ನಿನ್ನಯ ಜಪಿಸಿದರ ಬಗ್ಗೆ ಶಪಿಸುವುದು ಪೂರ್ವ ನಿಶ್ಚಯವೆಂಬುದ ಅಲ್ಲಗಳೆಯಬಹುದೇ?
ತಡಕಾಡಿ ಆರಿಸಿ ತಂದ ಅಕ್ಷರಗಳ ಪೋಣಿಸಿದ ಮಾಲೆಯ ನಾನು ಚಿಪ್ಪಳಿಸಿ ಬೀರುತ್ತಿರುವೆ,
ನಾನು ಎಂದೂ ಪ್ರೇಮಿಯೆಂದು ತೀರ್ಮಾನಿಸಬಹುದೇ?
Comments
Post a Comment