ಅರಂಧತಿಯ ಮೌನ
ಅಲ್ಲಿ ಬೆಳಕು ಸತ್ತಿತ್ತು.ಬಾಗಿಲುಗಳ ಹಿಂದಿನ ಕಿರಣಗಳ ಕತ್ತಲೆಯ ಹಸಿವು ಬಗೆದು ತಿಂದು ಮುಗಿಸಿತ್ತು.ಆದರೂ ತೀರದ ಹಸಿವು. ಅರುಂಧತಿಯ ಮೌನದ ಹಸಿವಿನಂತೆ.ಎದೆಯ ಆಳಕ್ಕೆ ಇಳಿದಷ್ಟೂ. ಟಿಸಿಲಾಗಿ ಒಡೆದ ಆತನ ನೆನಪು.ದಿನವೂ ಆಳವನ್ನು ಅರಿದು ಹಸಿವು ಶಮನವಾಗದಿರುವುದು ಪದ್ಧತಿ.
ಕತ್ತಲು ಕವಿದ ಬಾಗಿಲ ದಿಟ್ಟಿಸಿ ನೋಡಿದವಳ ಕಣ್ಣ್ಣೀರ ಹನಿ ತಾಳ್ಮೆ ಕಳೆದುಕೊಂಡು ಗಲ್ಲಗಳ ತೊಯ್ದಿತ್ತು.ಆತ ನೆನಪಿನಂಗಳದ ಅತ್ತಕಡೆ ನಿಂತು ನಕ್ಕ ಕ್ಷಣವೇ ಆಕೆಯ ಕಣ್ಣೀರಿನ ಜೀವಜಲ ಬರುವ ವಿರಹದ ಕಡು ಬೇಸಿಗೆಗೆ ಆವಿಯಾಗಿ ಅರ್ಪಣೆ ನೀಡಿತ್ತು.
ಅಂತಹ ಕತ್ತಲ ಸೀಳಿಯೇ ಆತ ಕಾಲಿಟ್ಟಿದ್ದು.. ಅವಳೆದೆಯ ಅಂಗಳಕ್ಕೆ..ಅದೇ ರಂಗಮಂದಿರದ ಪಾತ್ರವಾಗಿ.ಅವಳ ಅಚ್ಚರಿ ತುಂಬಿದ ಅಗಲ ಕಣ್ಣುಗಳ ನಾಚಿಕೆಯ ದೆಸೆಯಿಂದ ಕೆಳಗೆ ನೋಡುವಂತೆ ಮಾಡಿದ್ದು ಅವನ ಕ್ಷುದ್ರ ತೇಜಸ್ಸು..ಮುಂದೊಂದು ದಿನ ಬದುಕಿನ ಎಲ್ಲ ಬಣ್ಣಗಳೂ ಕರಡಿ ಮಾಸಿ ಹೋಗುವಂತೆ ಮಾಡಿದ ಯಾರೂ ಅರಿಯದ ಕ್ಷುದ್ರ ತೇಜಸ್ಸು..ಅನುದಿನವೂ ಬರಿಯ ಬಾಳನು ದಿಟ್ಟಿಸಿ ನೋಡುವ ಕ್ರಮಕ್ಕೆ ಆದಿಯನ್ನ ಬರೆದವನು.ಪಾತ್ರ ಪಾತ್ರವಾಗಿ ಪತ್ರ ಪ್ರೇಮವಾಗಿ ಪ್ರೇಮ ಪಾಶವಾಗಿ ಪಾಶ ಪ್ರಾಣವಾಗಿ ಪ್ರಾಣವೇ ತನ್ನ ಆಟ ಮುಗಿಸಿ ಮುಂದಿನೂರಿಗೆ ಹೋಗುವ ಸೊಲ್ಲೆತ್ತಿದರೆ?ಅರುಂಧತಿ ಬೀಳ್ಕೊಡುವುದರ ಹೊರತಾಗಿ ಮತ್ತೇನೂ ಮಾಡಲಾಗದ ಅಸಹಾಯಕ ಪರಿಸ್ಥಿತಿಯಲ್ಲಿ ಅಂದು ಆತನ ಮೊದಲ ಬಾರಿಗೆ ನೋಡಿದ ಹಾಗೆ ದೃಷ್ಟಿ ತಪ್ಪಿಸಿ ಕೂತಳು.. ಕಲ್ಲಾದಳು.. ಮೌನಿಯಾದಳು...
ಆತನೂ ಹಾಗೇ..ಅಪಸ್ವರದ ಶೃತಿಯ ಹೊರಹೋಗಲು ನೀಡದ ಅಂಜದ ಕಾವಲುಗಾರ.ಅರುಂಧತಿ ಆತ್ಮದಾಳಕ್ಕೂ ಇಣುಕಿ ಮುತ್ತಿನ ಧಾರೆ ಸುರಿದ ಶೂರ.ತಾನಿಲ್ಲದೆ ಅವಳಿಲ್ಲ ಎಂಬ ಮರೆಯದ ಪುಟಗಳ ಸಾಹುಕಾರನಾಗಿ ಅವಳನ್ನು ಅಲ್ಲಿಯೇ ನರಳಲು ಬಿಟ್ಟು ಅಕ್ಷರ ಸಮಾಧಿ ಮಾಡಿ ಹೊರಟವನು.. ಹೇಳದಯೇ..ತನ್ನ ನೆನಪುಗಳ ಧಿಕ್ಕರಿಸಿ ಹೋಗಬೇಡೆಂಬ ಕಡುಶಾಪವೆಂಬ ವರವ ನೀಡಿ ಹೊರಟವನು.ಆತ ಪಾಪಿಯೇ? ಅರುಂಧತಿಯ ಮಟ್ಟಿಗಂತೂ ಅಲ್ಲ..
ದೇವರ ಹತ್ತಿರ ಆಕೆ ಎಂದೂ ಪ್ರಶ್ನಿಸಲು ಹೋಗಲಿಲ್ಲ.. ಆತನಿದ್ದ..ಬಹು ಆಳವಾಗಿದ್ದ..ಅದೇ ಆಕೆಯ ಪಾಲಿನ ಪರಮ ಸತ್ಯವಾಗಿತ್ತು..ಸತ್ಯ ಕಟುವಾಗಿದ್ದಷ್ಟು ಸುಳ್ಳು ಎಷ್ಟೇ ಸಿಹಿಯಾದರೂ ಸುಳ್ಳಿನ ರುಚಿ ಹೀಡಿಸೊಲ್ಲ..ಬದುಕ ದೂಡುತ್ತಿದ್ದಳು ನಿಜ..ಹೃದಯ ಬಡಿಯದೇ..
ಸಂಕಟದಲ್ಲಿ ಹೋರಳುತ್ತಲೇ ಇರುತ್ತಾಳೆ.. ನರಳುತ್ತ ಬೆಳಕ ನೀಡಿ ಕಸಿದುಕೊಂಡ ಕತ್ತಲಿಗೆ ಛೀಮಾರಿ ಹಾಕುತ್ತಾಳೆ..ಯಾರೊಂದಿಗೂ ಆತನ ಕುರಿತು ಚರ್ಚೆಗೆ ಆಸ್ಪದ ನೀಡಲ್ಲ ಆಕೆ..ಆಕೆಯ ಮನಸ್ಸಿನ ಚೌಕಟ್ಟಿನಲ್ಲಿ ಸ್ಥಾಪಿಸಲ್ಪಟ್ಟ ಮೂರ್ತಿಯ ರೂಪು ರೇಷೆಗೆ ಧಕ್ಕೆ ಬಾರದಂತೆ...ಯಾಕೆಂದರೆ ಅವನು ಆಕೆಯ ಆತ..
ಈಗೀಗ ಜಗತ್ತು ಕೂಡ ಆಕೆಯೊಳಗಿನ ರಂಗಭೂಮಿಯ ನೋಡಿ ಮರುಕದಿಂದಲೋ, ಸೋತ ಭಾವದಿಂದಲೋ ಚಪ್ಪಾಳೆ ಬಾರಿಸುತ್ತಿದೆ...ಆತ ಮಾತು ಕಸಿದುಕೊಂಡು ಹೋದ ಕಳ್ಳ..ಈಕೆ ದೂರು ನೀಡಲಾಗದ ಮೌನಿ♥️
Comments
Post a Comment