ಪ್ರಶ್ನೆ
ಪ್ರಶ್ನೆ? ಹೂ..ಪ್ರೇಮದ ಉತ್ಕಟತೆಯನ್ನು ಪ್ರಶ್ನಿಸುತ್ತಲೇ ಇದ ಗೀಚುತ್ತಿರುವೆ! ಪ್ರಶ್ನೆ ತಪ್ಪಾ? ನನ್ನ ಪ್ರೇಮವ ಅಳೆಯುವುದು ತಪ್ಪಾ? ಅಥವಾ ಸ್ವಾಸ್ಥ್ಯ ಮೀರಿ ಮೂಲೆ ಗುಂಪಾದರೂ ಗತ ಜೀವಿ ಪ್ರೇಮವ ಸರಿಯಾಗಿ ಆದರಿಸದೇ ಇದ್ದ ನಾನು ಶಿಕ್ಷೆಗೆ ಒಳಗಾಗಬೇಕಾ? ನೀನೇ ಹೇಳು! ಆ ಶಿಕ್ಷೆಗಿಂತ ಪ್ರಶ್ನಿಸಿ ನಿನ್ನ ಪರಿಧಿಯಲ್ಲಿ ಹುಂಬ ಪ್ರಶ್ನೆಗಾತಿ ಆಗುವುದೇ ಒಳಿತು.ನಿನ್ನ ಹುಸಿಗೋಪದ ಶಿಕ್ಷೆ ಮಹಾಪ್ರೀತಿ ನನಗೆ. ನಿನ್ನೊಟ್ಟಿಗೆ ಪ್ರೇಮನೌಕೆ ಹತ್ತಿದಾಗ ಇದ್ಯಾವ ನಾವಿಕನೆಡೆಗೆ ನನ್ನ ಗುಬ್ಬಿ ಹೃದಯವ ತೂರಿ ಬಿಟ್ಟೆ ಅನಿಸಿತ್ತು..ಆದರೆ ನಿನ್ನ ಕೋಪವಿಲ್ಲದೆ ನೀನೆರೆವ ತುಸು ಪ್ರೀತಿ ಬಹು ಸಪ್ಪೆ!ನನ್ನಯ ಬಯಕೆಯೂ ಪೂರೈಸುವುದಿಲ್ಲ.. ನಿನಗೆಂದೇ ಮೀಸಲಿರುವ ಹಲವು ಮಜಲುಗಳಿವೆ..ಹೇಳಿದರೂ ಕೇಳದೇ ಹೀಗೆ ಹತ್ತು ಹಲವು ರೀತಿಯಲ್ಲಿ ಮತ್ತದೇ ರೀತಿಯಲ್ಲಿ ಹರಿಬಿಡುವೆ.ನಿನ್ನೆಡೆಗೆ ನನಗಿರುವುದು ಎಂದೂ ಬತ್ತದ ಕಡಲು. ಎಂದೆಂದಿಗೂ ದೃಢವಾಗಿರುವ ಗಿರಿ.. ಸುಸ್ತಾಗದೆ ಚಲಿಸುವ ಮೋಡಗಳು..ಸದಾ ಹೂವನ್ನೇ ಹಿಂಬಾಲಿಸಿ ಹೀರುವ ದುಂಬಿಗಳು..ಇವುಗಳಂತೆ ನನ್ನ ಪ್ರೀತಿ..ಅಮರ ಪ್ರೇಮವ,ಪ್ರೇಮದ ಇರುವಿಕೆಯ ಪ್ರಶ್ನಿಸಿ ಪ್ರೇಮ ಸೌಧವ ಕೆಡುವುವೆಯಾ ಎಂದು ನೀನು ಹೇಳುವೆ..ಆದರೆ ತಳಮಳವಿಲ್ಲದ ಪ್ರೀತಿ ಎತ್ತಣದು? ಈ ಪರಿಶೀಲನೆ ಒಂದು ವಿಕೃತ ಸುಖ!ನಿನ್ನಂತಹ ಜಾಣ ಕಿವುಡರಿಗೊಂದು ಬಹಿರಂಗ ಆಹ್ವಾನ!ಆಹಾ,ಇದೇನು ಎಲ್ಲ ಧಾರೆಯೆರೆದ ನಂತರವೂ ಇನ್ನೇನೋ ಹತ್ತುಹಲವುಗಳ ಉಪೇಕ್ಷೆ ಎಂದು ಕೊಳ್ಳುವೆಯಾ?ಪ್ರೀತಿ ಖಜಾನೆ ಎಂದಿಗೂ ತುಂಬದು!ಅದು ತುಂಬಿದ ದಿನ ಪ್ರೇಮಿಯ ಸಾವು..ಇಲ್ಲ ಪ್ರೇಮದ ಸಾವು!!
ಸಾಕು, ಇನ್ನೆಷ್ಟು ಬರೆಯಲಿ ಎಂದೆನಿಸಲ್ಲ..ಕ್ಷುದ್ರ ದೃಷ್ಟಿ ಬಿದ್ದರೂ ಅದರರಿವು ಎನಗಿಲ್ಲ!ನಿಚ್ಚಳವಾಗಿ ನಿನ್ನೆಡೆಗೆ ಪ್ರೀತಿ ಸೂಸಿ ಹಗುರಾಗ ಬೇಕೆಂದಿರುವೆ!ಆದರೂ ದಿನ ದಿನವೂ ಎದೆ ಭಾರ ನನಗೆ!ನಿನ್ನ ನಾನು ಅಳೆಯಲಾಗುತ್ತಿಲ್ಲ.. ಭರಪೂರವಾಗಿ ನೋಡಿ ನಿಲ್ಲ ಬೇಕೆನೆಸುತ್ತಿದೆ.. ಇದೇ ಉತ್ಕಟತೆಯೇ?ಅಥವಾ ಕಡಲಾಳದಲ್ಲಿ ಹೂತಿರುವ ನಿರ್ಭಾವ ಸ್ಥಿತಿಯೋ?
Comments
Post a Comment