ಕೊಂದುಕೊಂಬುವಿಕೆ🤎
ಚೂರಿಯ ಮೊನಚಾದ ತುದಿಯ ಕೊರಳಿಗೆ ಹಿಡಿದು ನಿನ್ನ ಮೇಲೆ ಪ್ರಕಟವಾಗುವ ಪ್ರೇಮವ ಪರಿಶೀಲಿಸಿಕೊಳ್ಳುವೆ!ಕಂಪು ಮಾಸಿದ ಪಕಳೆಗಳ ಪುಟಗಳ ನಡುವೆ ಕಾಪಾಡಿ ನನ್ನವೆಂಬುವುದ ಖಾತ ರಿಗೊಳಿಸಿಕೊಳ್ಳುವೆ!ಕಂಬನಿಯ ಕಡಿದಾದ ಕಣಿವೆಯ ಕೊನೆಯ ಕಲ್ಲು ಮೊನೆಯ ಮೇಲೆ ನಿತ್ತು ಮುಗಿಲ ದಿಟ್ಟಿಸಿಕೊಳ್ಳುವೆ!ಇರುಳಲ್ಲಿ ಸನಿಹದಲ್ಲೇ ಇರುವ ನಿನ್ನ ನಾನು ಕಣ್ಣರೆಪ್ಪೆಗಳ ಮಿಟುಕಿಸದೆ ನೋಡಿ ನಿದಿರೆಯ ಸರಪಳಿಯ ಕಿತ್ತೊಗೆಯುವೆ! ನನ್ನಸ್ತಿತ್ವವ ಇರಿದು ನಿನ್ನ ಗೆಳತಿಯಾಗಿ ಗೆದ್ದು ಬೀಗುವ ನಿಷಿದ್ಧ ಆಚರಣೆಗಳ ಅನಾಮತ್ತಾಗಿ ನನ್ನೆದೆಯ ಅಂಗಳಕ್ಕೆ ಬರಮಾಡುವೆ!ಸುಡುವ ವಿಸ್ಕಿಯ ಹುಚ್ಚೇರುವ ಅಮಲಿನ ಶಾಖದಲ್ಲಿಯೂ ನಿನ್ನದೆಯ ಶೀತವನ್ನು ಅರಸಿ ಹೊರಡುವೆ! ಪಂಚಭೂತಗಳಿಗೆ ಪ್ರೇಮದ ಸವಾಲೊಡ್ಡುವೆ! ಹುಚ್ಚು ಪ್ರೇಮಿಯಾಗಿ ಗತವನ್ನೇ ಪ್ರಶ್ನಮಾಲಿಕೆಯನ್ನಾಗಿಸಿ ಅವಧಾನಿಯಾಗುವೆ!ಕಾವ್ಯಾತ್ಮಕ ಪ್ರೇಮದ ಕರೆಯೋಲೆಗಾಗಿ ಕಟುಸತ್ಯಗಳ ಕಮರಿಸಲೂ ನಾನಿಂದು ಸಿದ್ಧ! ಕಠಿಣಾತೀತ ಮನದ ಗೋಡೆಯ ಒಡೆದು ಹಾಕಿ ನಿನ್ನದಲ್ಲದ ಎಲ್ಲವ ಆಚೆ ನೂಕುವೆ! ಕೊಂದುಕೊಂಬುವಿಕೆಯ ಅತಿ ಶ್ರದ್ಧೆಯಿಂದ ಆಚರಿಸುವೆ!ಎಲ್ಲ ನಿನಗಾಗಿ! ಅರ್ಥಾತ್ ನನಗಾಗಿ! ಕೊಲೆಗೆಡುಕಿ ಪ್ರೇಮಿಯನ್ನಾಗಿಸಿಬಿಟ್ಟೆ ನೀನು! ...